ಮಂಗಳೂರು: ಹೈಟೆಕ್ ವಂಚನೆ, ದರೋಡೆಗೆ ಸಂಚು ಹಾಕಿದ್ದ ಅಂತಾರಾಜ್ಯ ತಂಡ ಮಂಗಳೂರಿನ ಕದ್ರಿ ಪೊಲೀದರ ಬಲೆಗೆ ಬಿದ್ದಿದೆ. ಅಪಹರಿಸಿ ದರೋಡೆಗೆ ಸಂಚು ಹೂಡಿದ್ದ ಕೇರಳ ಮೂಲದ ಸ್ಯಾಂ ಪೀಟರ್ ನೇತೃತ್ವದ ಎಂಟು ಆರೋಪಿಗಳ ತಂಡವನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಕೊಲ್ಕತ್ತಾ ಮತ್ತು ಭುವನೇಶ್ವರ ಲಿಂಕ್ ಹೊಂದಿದ್ದ ಸ್ಯಾಂ ಪೀಟರ್ , ಕೇಂದ್ರ ಸರಕಾರಿ ಇಲಾಖೆಯ ನಕಲಿ ನಂಬರ್ ಪ್ಲೇಟ್ ಹಾಕಿ ದರೋಡೆಗೆ ಸಂಚು ಹಾಕಿದ್ದ. ಕಾರಿನಲ್ಲಿ ಎನ್ ಸಿಐಬಿ, ಡೈರೆಕ್ಟರ್, Govt of India ಎಂದು ನಕಲಿ ಬೋರ್ಡ್ ಹಾಕಿಕೊಂಡಿದ್ದ ಕೇರಳದ ಕೊಯಿಲಾಡಿ ಮೂಲದ ಸ್ಯಾಂ ಪೀಟರ್, ಮಡಿಕೇರಿಯ ಟಿ.ಕೆ ಬೋಪಣ್ಣ, ಬೆಂಗಳೂರಿನ ನೀಲಸಂದ್ರದ ಮದನ್, ಉತ್ತರ ಹಳ್ಳಿಯ ಕೋದಂಡರಾಮ, ವಿರಾಜಪೇಟೆಯ ಚಿನ್ನಪ್ಪ , ಕನಕಪುರದ ಸುನಿಲ್ ರಾಜು, ಮಂಗಳೂರಿನ ಕುಳೂರಿನ ಜಿ. ಮೊಯ್ದೀನ್, ಫಳ್ನೀರ್ ನಿವಾಸಿ ಎಸ್.ಎ.ಕೆ ಅಬ್ದುಲ್ ಲತೀಫ್ ಬಂಧಿತ ಆರೋಪಿಗಳಾಗಿದ್ದಾರೆ. ಇನ್ನು ಆರೋಪಿಗಳಿಂದ ಎರಡು ಮಹೀಂದ್ರಾ ಕಾರು, 45 ಎಂಎಂ ಪಿಸ್ತೂಲು, ಏರ್ ಗನ್ ರೀತಿಯ ಆಯುಧ, ಐದು ಸಜೀವ ಗುಂಡು, ಲ್ಯಾಪ್ ಟಾಪ್, ವಾಯ್ಸ್ ರೆಕಾರ್ಡರ್ ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಪಂಪ್ ವೆಲ್ ನಲ್ಲಿ ಲಾಡ್ಜ್ ಪಡೆದು ದರೋಡೆ ಸಂಚು ರೂಪಿಸಿದ್ದ ಇವರು ನಿನ್ನೆ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಹಿನ್ನೆಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮಂಗಳೂರಿನ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ಕೈಗೊಂಡಿದ್ದಾರೆ.