ಬಾದಾಮಿ ಕ್ಷೇತ್ರದ ನೆರೆ ಹಾವಳಿ ಪ್ರದೇಶ ಭೇಟಿಗೆ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಮೂರು ದಿನಗಳ ಪ್ರವಾಸದಲ್ಲಿ ಸಿದ್ದರಾಮಯ್ಯ, ಬಾದಾಮಿ ಕ್ಷೇತ್ರದಲ್ಲಿ ಪ್ರವಾಹ ಬಾಧಿತ 40 ಕ್ಕೂ ಅಧಿಕ ಗ್ರಾಮಗಳಿಗೆ ಭೇಟಿ ನೀಡಿ, ಸಂತ್ರಸ್ತರ ಅಹವಾಲು ಆಲಿಸಲಿದ್ದಾರೆ. ಆಗಸ್ಟ್ 19 ರಿಂದ 21 ರ ವರೆಗೆ ಪ್ರವಾಸ ಫಿಕ್ಸ್ ಆಗಿದ್ದು, ಮೂರು ದಿನ ನೆರೆಹಾನಿ ವೀಕ್ಷಣೆ ಬಳಿಕ 21 ರಂದು ಸಂಜೆ ಬಾದಾಮಿಯಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಕಣ್ಣಿನ ಶಸ್ತ್ರಚಿಕಿತ್ಸೆಯಿಂದಾಗಿ ಕ್ಷೇತ್ರದ ನೆರೆ ಹಾವಳಿ ಪ್ರದೇಶಕ್ಕೆ ಈ ವರೆಗೂ ಸಿದ್ದರಾಮಯ್ಯ ಭೇಟಿ ನೀಡಿರಲಿಲ್ಲ. ಕೆಲ ದಿನಗಳ ಹಿಂದೆ ಸಿದ್ದು ಪುತ್ರ ಡಾ.ಯತೀಂದ್ರ ಪ್ರವಾಹ ಸ್ಥಳ ವೀಕ್ಷಣೆ ಮಾಡಿ ಹೋಗಿದ್ರು. ಮಲಪ್ರಭಾ ನದಿ ಪ್ರವಾಹದಿಂದ ಬದಾಮಿ ಕ್ಷೇತ್ರದ ಜನರು ತತ್ತರಿಸಿ ಹೋಗಿದ್ದಾರೆ. ತಾಲ್ಲೂಕಿನ 40 ಕ್ಕೂ ಅಧಿಕ ಗ್ರಾಮಗಳು ಪ್ರವಾಹದಿಂದ ಬಾಧಿತವಾಗಿವೆ. ಭಾರಿ ಪ್ರಮಾಣದಲ್ಲಿ ಮನೆಗಳು ಬಿದ್ದಿವೆ, ಫಸಲು ಕೊಚ್ಚಿದೆ, ಹೈನೋದ್ಯಮಕ್ಕೆ ಬರೆ ಬಿದ್ದಿದೆ. ಇದ್ರಿಂದ ಕ್ಷೇತ್ರದ ಜನರು ಕಣ್ಣೀರಲ್ಲಿ ಕೈ ತೊಳಿತಿದ್ದಾರೆ. ಪ್ರವಾಹ ಬಂದು 15 ದಿನಗಳಾದರೂ ಕ್ಷೇತ್ರಕ್ಕೆ ಶಾಸಕ ಸಿದ್ದರಾಮಯ್ಯ ಬಂದಿರಲಿಲ್ಲ. ಪಕ್ಷದ ಸಭೆಯಲ್ಲಿ ದೆಹಲಿಗೆ, ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಸಿಎಂ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಿದ್ರು. ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ದ ಸೋತಿದ್ದ ಶ್ರೀರಾಮುಲು ಬಾದಾಮಿ ಕ್ಷೇತ್ರದ ನೆರೆ ಹಾನಿ ವೀಕ್ಷಿಣೆ ಮಾಡಿದ್ರು. ಅಲ್ದೇ ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಂದಿಲ್ಲ ಅಂತ ಕ್ಷೇತ್ರದ ಜನರು ಆಕ್ರೋಶ ವ್ಯಕ್ತಪಡಿಸ್ತಾ ಇದ್ರು. ಶ್ರೀರಾಮುಲು ಅಂತೂ ಸಿದ್ದರಾಮಯ್ಯ ವಿರುದ್ದ ತೀವ್ರ ವಾಗ್ದಾಳಿ ನಡಿಸಿದ್ರು. ನೀವು ವಿಧಾನಸೌಧದ ಮೆಟ್ಟಿಲು ಹತ್ತಲು ಬಾದಾಮಿ ಜನರು ಕಾರಣ. ಅವರ ಕಣ್ಣೀರು ಒರೆಸಲು ಬಾರದ ನಿಮ್ಮ ಮೇಲೆ ಬನಶಂಕರಿ ತಾಯಿ ಸಿಟ್ಟು ಮಾಡ್ಕೊಂತಾಳ ಅಂತ ಟೀಕಿಸಿದ್ರು. ಎಲ್ಲ ಟೀಕೆ, ಟಿಪ್ಪಣಿ ಬಳಿಕ ಇದೀಗ ಸಿದ್ದರಾಮಯ್ಯ ಮೂರು ದಿನ ಕ್ಷೇತ್ರದಲ್ಲೇ ಇದ್ದು ನೆರೆಹಾವಳಿ ವೀಕ್ಷಿಸಲು ಮುಂದಾಗಿದ್ದಾರೆ.