ಬೆಳಗಾವಿ: ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಸಮೀಪದ ವೀರಪನ ಕೊಪ್ಪ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ದುರ್ಮರಣಕ್ಕಿಡಾಗಿದ್ದಾರೆ.
ಧಾರವಾಡ ಕಡೆಯಿಂದ ಬೆಳಗಾವಿ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಕಾರು ಮುಂಬದಿಯ ಲಾರಿಗೆ ಹಿಂದಿನಿಂದ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವಿಗಿಡಾಗಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಮೂಲದವರು ಎನ್ನಲಾಗುತ್ತಿದೆ. ಇವರೆಲ್ಲ ಬೆಳಗಾವಿಗೆ ಆಸ್ಪತ್ರೆಗೆಂದು ಬರುತ್ತಿದ್ದರು ಎನ್ನಲಾಗಿದೆ.
ಇನ್ನು ಮೃತರನ್ನು ವಾಸಿಂ ಖಾನ್ (40) ಸೈಯದ್ ಇಸ್ಮಾಯಿಲ್ ದಾವುದ್ (65) ಸುಶೀಲಾ ಫರ್ನಾಂಡಿಸ್ (60) ಎಂದು ಗುರುತಿಸಲಾಗಿದೆ. ಜಾವೇದ್ (41) ಹಾಗೂ ಮುಕ್ತಿಯಾರ್ ಸಯ್ಯದ್ (60) ತೀವ್ರ ಗಾಯಗೊಂಡಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಹಿರೇಬಾಗೆವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತಪಟ್ಟವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಮೃತರ ಸಂಬಂಧಿಕರು ಸ್ಥಳಕ್ಕೆ ಆಗಮಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.