ಬೆಳಗಾವಿ: ಬೆಳಗಾವಿಯ ಅನಗೋಳಕ್ಕೆ ಭೇಟಿ ನೀಡಿ, ರಾಯಣ್ಣ ಮೂರ್ತಿಗೆ ಸಚಿವ ಈಶ್ವರಪ್ಪ ಮಾಲಾರ್ಪಣೆ ಮಾಡಿದರು. ಬೆಳಗಾವಿ ಅನಗೋಳದ ಕನಕದಾಸ ಕಾಲೋನಿಯಲ್ಲಿನ ರಾಯಣ್ಣ ಮೂರ್ತಿಯ ದರ್ಶನ ಪಡೆದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ರಾಯಣ್ಣ ಪ್ರತಿಮೆಗೆ ನಮಸ್ಕರಿಸಿದರು. ಇನ್ನು ಈ ವೇಳೆ ಸಚಿವ ಈಶ್ವರಪ್ಪ ಅವರಿಗೆ ಕುರುಬ ಸಮುದಾಯದ ಮುಖಂಡರು ಸಾಥ್ ನೀಡಿದ್ರು.
ಇನ್ನು ಇದೇ ವೇಳೆ ಮಾತನಾಡಿದ ಸಚಿವ ಈಶ್ವರಪ್ಪ, ಬೆಳಗಾವಿ ಪ್ರಕರಣಗಳ ಕುರಿತು ಕಾಂಗ್ರೆಸ್ ನಲ್ಲೇ ಎರಡು ಧ್ವನಿ ಇದೆ. ಸದನದಲ್ಲಿ ಎಂಇಎಸ್ ಬ್ಯಾನ್ ಮಾಡಬೇಕು ಎಂದು ಸಿದ್ದರಾಮಯ್ಯನವರು ಹೇಳ್ತಾರೆ. ಆದ್ರೆ ಇದು ಯಾರೋ ಕಿಡಿಗೇಡಿಗಳ ಕೃತ್ಯ, ಎಂಇಎಸ್ ಇದರ ಹಿಂದೆ ಇಲ್ಲ ಅಂತಾ ಡಿಕೆಶಿ ಹೇಳ್ತಾರೆ. ಡಿ.ಕೆ.ಶಿವಕುಮಾರ್ ಯಾರೋ ಒಬ್ಬ ಶಾಸಕರ ಸಂತೈಸಲು ಈ ರೀತಿ ಹೇಳಿಕೆ ನೀಡಬಾರದು ಎಂದು ವಾಗ್ದಾಳಿ ನಡೆಸಿದ್ರು.
ಯಾವ ಶಾಸಕರ ಓಲೈಕೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ರತ್ತ ಬೊಟ್ಟು ಮಾಡಿದ್ರು. ಲಕ್ಷ್ಮೀ ಹೆಬ್ಬಾಳಕರ್ ಕ್ಷೇತ್ರದಲ್ಲಿ ಮೂಕ್ಕಾಲು ಭಾಗ ಎಂಇಎಸ್ ಬೆಂಬಲ ಪಡೆಯಲು ಡಿಕೆಶಿ ಈ ಆಟ ಆಡಿರಬಹುದು. ಇದನ್ನ ನಾಡಿನ ಜನ ಒಪ್ಪೋದಿಲ್ಲ. ಈ ದುಷ್ಕೃತ್ಯ ಮಾಡಿದವರು ಮಹಾರಾಷ್ಟ್ರ ಹೇಡಿಗಳ ಸಮೀತಿಯವರು. ಈ ದುಷ್ಕೃತ್ಯದಿಂದ ಇಡೀ ಕರ್ನಾಟಕ ಜನತೆಗೆ ನೋವಾಗಿದೆ ಎಂದರು.
ಹಗಲು ಹೊತ್ತು ಬಂದು ಈ ರೀತಿ ಮಾಡಿದ್ರೆ ಕನ್ನಡಿಗರು ಅವರನ್ನ ಚಿಂದಿ ಚಿಂದಿ ಮಾಡ್ತಿದ್ರು. ಈ ಕೃತ್ಯಗಳ ಹಿಂದೆ ಯಾರಿದ್ದಾರೆ, ಯಾವುದಾದ್ರು ಸಂಘ, ಸಂಸ್ಥೆಗಳು, ರಾಜಕೀಯ ನಾಯಕರು ಇದ್ದಾರಾ, ಈ ಎಲ್ಲ ಅಂಶಗಳು ತನಿಖೆ ವೇಳೆ ಹೊರ ಬರುತ್ತವೆ. ಎಂಇಎಸ್ ದುಷ್ಕೃತ್ಯದ ವಿರುದ್ದ ಖಂಡನಾ ನಿರ್ಣಯವನ್ನು ಕೇಂದ್ರಕ್ಕೆ ಕಳಿಸಿದ್ದೇವೆ. ಎಂಇಎಸ್ ಬ್ಯಾನ್ ಮಾಡಬೇಕೆಂದು ಪ್ರಧಾನಿ ಮೋದಿ ಗಮನಕ್ಕೂ ತರುತ್ತೇವೆ ಎಂದಿದ್ದಾರೆ.
ಇನ್ನು ಇಂತಹ ದುಷ್ಕ್ರತ್ಯ ಮಾಡಿದವರನ್ನ ಗುಂಡಿಕ್ಕಿ ಕೊಲ್ಲಬೇಕು ಎಂದು ನಿನ್ನೆ ವಿಧಾನಸಭೆಯಲ್ಲೂ ಹೇಳಿದಿನಿ ಈಗಲೂ ಹೇಳುತ್ತಿದ್ದೇನೆ. ಉತ್ತರ ಪ್ರದೇಶದಲ್ಲಿ ದೇಶದ್ರೋಹಿಗಳನ್ನ, ಗುಂಡಾ ಚಟುವಟಿಕೆ ಮಾಡೋರನ್ನ ಯೋಗಿ ಆದಿತ್ಯನಾತ ಸರಕಾರ ಅಲ್ಲೇ ಶೂಟ್ ಆಟ್ ಸೈಟ್ ಮಾಡಿದೆ. ಹೀಗಾಗಿ ಉತ್ತರ ಪ್ರದೇಶ ಶಾಂತವಾಗಿದೆ ಎನ್ನುವ ಮೂಲಕ ನಾಡದ್ರೋಹಿಗಳ ವಿರುದ್ದ ಹರಿಹಾಯ್ದರು.
ಇನ್ನು ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲು, ರಮೇಶ್ ಜಾರಕಿಹೊಳಿ ವಿರುದ್ದ ಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಈಶ್ವರಪ್ಪ, ಚುನಾವಣೆಯಲ್ಲಿ ನಾನು ಸೋತಿದ್ದೇನೆ, ಗೆದ್ದಿದ್ದೇನೆ. ಗೆದ್ದಾಗ ಸಹಕಾರ ಕೊಟ್ಟಿದ್ದಾರೆ, ಸೋತಾಗ ಸಹಕಾರ ಕೊಟ್ಟಿಲ್ಲ ಎಂದು ಹೇಳೊದು ಒಳ್ಳೆಯದಲ್ಲ ಎಂದರು.