ಬೆಳಗಾವಿ: ಬೆಳಗಾವಿಯ ಅನಗೋಳದ ಕನಕದಾಸ ಕಾಲೋನಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ ನೀಡಿದ್ರು. ಕನಕದಾಸ ಕಾಲೋನಿಯಲ್ಲಿ ಮರು ಪ್ರತಿಷ್ಠಾಪನೆಗೊಂಡಿರುವ ರಾಯಣ್ಣನ ಪ್ರತಿಮೆಗೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಘಟನಾ ಸ್ಥಳ ಪರಿಶೀಲನೆ ನಡೆಸಿದ್ರು.
ಅನಗೊಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ರಾಷ್ಟ್ರಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಪ್ರಾಣಕ್ಕೊಟ್ಟಂತಹ ವ್ಯಕ್ತಿಗಳಿಗೆ ಅವಮಾನ ಮಾಡುವ ಕೆಲಸ ಒಂದು ಮಾನಸಿಕ ರೋಗಿಗಳ ಕೆಲಸ ಇದು. ರಾಯಣ್ಣ, ಶಿವಾಜಿ ಯಾವುದೇ ಜಾತಿಗೆ, ಸಮುದಾಯಕ್ಕೆ ಸೀಮಿತ ಆಗಿರಲಿಲ್ಲ. ಇಡೀ ಮನುಕುಲ, ದೇಶವನ್ನು ಉದ್ದಾರ ಮಾಡುವ ಕೆಲಸ ಮಾಡಿದ್ದಾರೆ ಈ ಮಹಾನ ನಾಯಕರು ಎಂದಿದ್ದಾರೆ.
ಕೆಲವರು ಕನ್ನಡ ಧ್ವಜ ಸುಡುವ ಕೆಲಸ ಮಾಡಿದ್ದಾರೆ, ಕೆಲವೇ ಕಿಡಿಗೇಡಿಗಳು ಸಮಾಜದಲ್ಲಿ ಹುಳಿ ಹಿಂಡುವ ಇಂತಹ ಕೆಲಸ ಮಾಡಿದ್ದಾರೆ. ಇವರನ್ನು ಸುಮ್ಮನೇ ಬಿಡಲ್ಲ. ರಾಯಣ್ಣನನ್ನು ಬ್ರಿಟಿಷರಿಗೆ ಹಿಡುದು ಕೊಟ್ಟವರ ಕುಲದವರು ಇವರು. ಅಂತವರನ್ನ ಬಿಡಲ್ಲ, ಮಟ್ಟಹಾಕುತ್ತೇವೆ ಎಂದು ಗುಡುಗಿದರು.
ಪೊಲೀಸ್ ರಿಂದ ವಿಶೇಷ ಕಾರ್ಯಾಚರಣೆ ಮಾಡಲಾಗಿದೆ. ಬೆಳಗಾವಿ ಪ್ರಕರಣ ಸಂಬಂಧಿಸಿದಂತೆ ಇದುವರೆಗೆ 38 ಜನರನ್ನು ಅರೆಷ್ಟ ಮಾಡಲಾಗಿದೆ. ಬೆಂಗಳೂರು ಶಿವಾಜಿ ವಿಗ್ರಹಕ್ಕೆ ಮಸಿ ಬಳಿದವರನ್ನ 7 ಜನರನ್ನು ಅರೆಸ್ಟ್ ಮಾಡಲಾಗಿದೆ. ಇವರ ಮೇಲೆ ಗೂಂಡಾ ಕಾಯ್ದೆ ಹಾಕಲು ಚಿಂತನೆ ಮಾಡಲಾಗಿದೆ. ಇನ್ನು ಇದರ ಹಿಂದೆ ಯಾರು ಇದ್ದಾರೆ ಅನ್ನೊದನ್ನ ಪತ್ತೆ ಹಚ್ಚಲಾಗುತ್ತಿದೆ. ಇದು ಹೊರಗೆ ಬರಬೇಕು. ಕೆಲವರ ಮುಖವಾಡ ಹೊರಗೆ ಬರಬೇಕು ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ಗಲಾಟೆ ಹಿನ್ನೆಲೆ. ಮಹಾರಾಷ್ಟ್ರದ ಸರ್ಕಾರ, ಗೃಹ ಸಚಿವರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇವೆ ಎಂದ ಸಚಿವರು, ರಾಜ್ಯದಲ್ಲಿ ನಡೆದ ಘಟನೆಗಳ ಸಂಬಂಧ ಯಾರ ಯಾರ ಮೇಲೆ ಗೂಂಡಾ ಕಾಯ್ದೆ, ಗಡಿ ಪಾರು ಮಾಡಬೇಕು ಅನ್ನೊದು ಸಲಹೆ ಬಂದಿದೆ ಎಂದಿದ್ದಾರೆ.
ಎಂಇಎಸ್ ನಿಷೇಧ ವಿಚಾರ ಚರ್ಚೆ ಮಾಡ್ತಿವಿ. ಇಂತಹ ಮಾಡಿದವರು ದೇಶದ್ರೊಹಿಗಳು. ಇವರ ಮೇಲೆ ದೇಶದ್ರೋಹ ಕೇಸ್ ಹಾಕಲು ಚಿಂತನೆ ಮಾಡಲಾಗುತ್ತಿದೆ ಎಂದಿದ್ದಾರೆ.