ಬೆಳಗಾವಿ: ಗ್ರಾಮ ಪಂಚಾಯತಿ ಸದಸ್ಯರ ಗೌರವ ಧನ ಹೆಚ್ಚಳ ಆಗುವುದರ ಹಿಂದೆ ಮಹಾಂತೇಶ್ ಕವಟಗಿಮಠ ಅವರ ಪರಿಶ್ರಮ ಬಹಳಷ್ಟಿದೆ. ಎರಡು ಬಾರಿ ಆಯ್ಕೆ ಆಗಿರುವ ಅವರು ಸದನದಲ್ಲಿ ಗ್ರಾಮಪಂಚಾಯತಿ ಅಭಿವೃದ್ಧಿಗೆ ಬಹಳಷ್ಟು ಬಾರಿ ಧ್ವನಿ ಎತ್ತಿದ್ದಾರೆ ಎಂದು ಅರಣ್ಯ ಹಾಗೂ ಆಹಾರ, ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ತಿಳಿಸಿದರು.
ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಪರವಾಗಿ ಯಮಕನಮರಡಿ ವಿಧಾನಸಭಾ ಕ್ಷೇತ್ರದ ನಾಲ್ಕು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ, ಬಿರುಸಿನ ಪ್ರಚಾರ ನಡೆಸಿ ಮಾತನಾಡಿ ಅವರು ಅನುಭವಿ ರಾಜಕಾರಣಿ ಮಹಾಂತೇಶ್ ಕವಟಗಿಮಠರನ್ನು ಬೆಂಬಲಿಸುವ ಮೂಲಕ ಗ್ರಾಮ ಪಂಚಾಯಿತಿಗಳ ಶ್ರೇಯೋಭಿವೃದ್ದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸ್ಥಳಿಯ ಸಂಸ್ಥೆಗಳ ನಾಡಿ ಮಿಡಿತ ಅರಿತಿದ್ದು, ಅನೇಕ ಅಭಿವೃದ್ಧಿ ಕೆಲಸ ಮಾಡುವ ಇಚ್ಛಾಶಕ್ತಿ ಹೊಂದಿದ್ದಾರೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಸಮರ್ಥವಾಗಿ ಸರಕಾರದ ಗಮನ ಸೆಳೆಯುವ ಶಕ್ತಿ ಅವರಲ್ಲಿದೆ. ಪ್ರತಿಯೊಬ್ಬರೂ ಬಿಜೆಪಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲುವಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.
ಬೆಳಗಾವಿ ವಿಧಾನಪರಿಷತ್ ಚುನಾವಣೆ ದಿನದಿಂದ ದಿನಕ್ಕೆ ರಂಗೆರುತ್ತಿದ್ದಂತೆ, ಬಿಜೆಪಿ ಅಭ್ಯರ್ಥಿ ಪರ ಮತಬೇಟೆಗೆ ಇಳಿದಿರುವ ಸಚಿವ ಉಮೇಶ್ ಕತ್ತಿ, ಯಮಕನಮರಡಿ ವಿಧಾನಸಭಾ ಕ್ಷೇತ್ರದ, ದಡ್ಡಿ, ಹತ್ತರಗಿ, ಪಾಶ್ಚಾಪೂರ, ಉಳ್ಳಾಗಡಿ ಖಾನಾಪೂರ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಂ ಪಂಚಾಯತಿ ಸದಸ್ಯರ ಪ್ರತ್ಯೇಕ ಸಭೆ ಆಯೋಜಿಸಿ, ಮತ ಯಾಚನೆಯಲ್ಲಿ ತೊಡಗಿದ್ದಾರೆ.
ಅವರ ಪ್ರಚಾರದ ಪ್ರವಾಸದಲ್ಲಿ ಮಾಜಿ ಸಂಸದರಾದ ಅಮರಸಿಂಹ ಪಾಟೀಲ್, ಮಾಜಿ ಸಚಿವರಾದ ಶಶಿಕಾಂತ ನಾಯಕ್, ಬಿಜೆಪಿ ಮುಖಂಡರಾದ ಮಾರುತಿ ಅಷ್ಟಗಿ, ಗುರುರಾಜ್ ಸೇರಿದಂತೆ ಹುಕ್ಕೇರಿ ತಾಲೂಕಿನ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.