ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳು ಒಂದೊಂದಾಗಿ ಜಲದಿಗ್ಬಂಧನದಿಂದ ಮುಕ್ತವಾಗುತ್ತಿವೆ. ಸದ್ಯ ನೆರೆ ಬಾಧಿತ ಗ್ರಾಮಗಳಿಗೆ ಮರಳುತ್ತಿರುವ ಕಾಳಜಿ ಕೇಂದ್ರಗಳಲ್ಲಿ ಇದ್ದ ನಿರಾಶ್ರಿತರು ತಮ್ಮ ಮನೆಯ ಪರಿಸ್ಥಿತಿ ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಜೀವ ಉಳಿದರೆ ಸಾಕು ಅಂತ ಉಟ್ಟ ಬಟ್ಟೆಯಲ್ಲಿ ದೋಣಿ ಹತ್ತಿದವರ ಬದುಕು ಮತ್ತಷ್ಟು ಕರಾಳವಾಗಿದ್ದು ಮನೆಗಳಲ್ಲಿ ಬಿಟ್ಟು ಬಂದ ಹಲವು ಮಹತ್ವದ ದಾಖಲೆಗಳು, ಎಲ್ ಐಸಿ ಪಾಲಿಸಿ, ಬ್ಯಾಂಕ್ ಖಾತೆಯ ಪುಸ್ತಕಗಳು, ಮನೆಯ ಕಾಗದ ಪತ್ರಗಳು ಸೇರಿದಂತೆ ವಿದ್ಯಾರ್ಥಿಗಳ ಪುಸ್ತಕಗಳು ಕೂಡ ಪ್ರವಾಹದ ನೀರಿನಲ್ಲಿ ಹಾಳಾಗಿವೆ. ಇನ್ನು ಮನೆಗಳಲ್ಲಿ ಸಂಗ್ರಹಿಸಿ ಇಟ್ಟಿದ್ದ ಬೇಳೆ ಕಾಳು ಮತ್ತು ಧವಸದಾನ್ಯಗಳು ಕೂಡ ಮೊಳಕೆ ಬಂದು ಉಪಯೋಗಕ್ಕೆ ಬಾರದಂತಾಗಿದ್ದು, ದಾನಿಗಳು ಕೊಡುತ್ತಿರುವ ಪಡಿತರಕ್ಕಾಗಿ ನಿರಾಶ್ರಿತರು ಬೊಗಸೆ ಒಡ್ಡುತ್ತಿರುವ ದೃಶ್ಯಗಳು ಮನಕಲಕುತ್ತಿವೆ. ಚಿಕ್ಕೋಡಿ ವ್ಯಾಪ್ತಿಯ ಹುಕ್ಕೇರಿ, ಅಥಣಿ, ರಾಯಭಾಗ, ನಿಪ್ಪಾಣಿ, ಕಾಗವಾಡ ತಾಲೂಕಿನ 81 ಕ್ಕೂ ಹೆಚ್ಚು ಗ್ರಾಮಗಳು ಸದ್ಯ ಈ ರೀತಿಯ ಸ್ಥಿತಿಯಲ್ಲಿ ಇದ್ದು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ.