ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ ಎದುರಾಗಿದೆ. ಯಾವುದೇ ಕ್ಷಣದಲ್ಲಾದ್ರೂ ಕಟ್ಟಡ ಕುಸಿಯುವ ಸಾಧ್ಯತೆಗಳಿವೆ. ಹೌದು ಕಮಲಾನಗರದ ಶಂಕರ್ ನಾಗ್ ಬಸ್ ನಿಲ್ದಾಣದ ಹತ್ತಿರ ಇರುವ ೩ ಅಂತಸ್ತಿನ ಕಟ್ಟಡ ಕುಸಿದು ಬೀಳುವ ಹಂತದಲ್ಲಿದೆ. ರಾಜೇಶ್ವರಿ ಎಂಬುವರಿಗೆ ಸೇರಿದ ಬಿಲ್ಡಿಂಗ್ ಕುಸಿಯುತ್ತಿರುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ಅಲ್ಲಿ ವಾಸವಿದ್ದ ೪ ಕುಟುಂಬ ಹೊರಗೆ ಓಡಿ ಬಂದಿದೆ.
ಮನೆಯೊಳಗಡೆ ಪಾತ್ರೆ, ಪಗಟೆ, ಬಟ್ಟೆ, ವಸ್ತುಗಳು ಹಾಗೆಯೇ ಇವೆ. ಸದ್ಯ ಈ ನಾಲ್ಕು ಕುಟುಂಬ ದಿಕ್ಕು ತೋಚದೆ ಕಂಗಾಲಾಗಿವೆ. ಇದೇ ಕಟ್ಟಡದಲ್ಲಿ ಆರು ಕುಟುಂಬಗಳು ವಾಸವಾಗಿದ್ದವು. ಆದ್ರೆ ಶಿಥಿಲಾವಸ್ಥೆಗೊಂಡಿದ್ದ ಕಾರಣ ಮೂರು ಮನೆಗಳನ್ನು ಖಾಲಿ ಮಾಡಲಾಗಿತ್ತು. ಸದ್ಯ ಕಟ್ಟಡದಲ್ಲಿ ನಾಲ್ಕು ಕುಟುಂಬಗಳು ವಾಸವಾಗಿವೆ. ಇದೀಗ ಕುಸಿಯುವ ಹಂತದಲ್ಲಿದ್ದು, ಸ್ಥಳಕ್ಕೆ BBMP, ಅಧಿಕಾರಿಗಳು ಮತ್ತು NDRFನ ನುರಿತ ತಜ್ಞರಿಂದ ಪರಿಶೀಲನೆ, ಬಳಿಕ ತೆರವು ಕಾರ್ಯಾಚರಣೆ ನಡೆಯಲಿದೆ. ಕಟ್ಟಡದ ಸುತ್ತಮುತ್ತಲಿನ ಮನೆಗಳಿಗೆ ಹಾನಿ ಆಗದಂತೆ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.