ನೆಲಮಂಗಲ: ಕಾಲೇಜಿಗೆ ಬರುವ ವೇಳೆಯಲ್ಲಿ ಪೋಲಿಪುಂಡರ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ. ಕೂಡಲೇ ಇವರ ಹಾವಳಿ ತಪ್ಪಿಸಿ ಎಂದು ನೂರಾರು ಕಾಲೇಜು ವಿದ್ಯಾರ್ಥಿಗಳು ಶಾಸಕ ಶ್ರೀನಿವಾಸಮೂರ್ತಿ ಅವರನ್ನು ತಡೆದು ಮನವಿ ಪತ್ರ ನೀಡಿದ ಪ್ರಸಂಗ ನಡೆದಿದೆ. ಬೆಂಗಳೂರು ಹೊರವಲಯ ನೆಲಮಂಗಲ ನಗರದ ಸೊಂಡೆಕುಪ್ಪ ರಸ್ತೆಯ ಪವಾಡ ಬಸವಣ್ಣ ದೇವರ ಮಠದ ನೂರಾರು ವಿದ್ಯಾರ್ಥಿನಿಯರು ಶ್ರೀನಿವಾಸಮೂರ್ತಿಗೆ ಪತ್ರ ನೀಡಿ ಮನವಿ ಮಾಡಿಕೊಂಡಿದ್ದಾರೆ.
ನೆಲಮಂಗಲ ನಗರಸಭೆ ವ್ಯಾಪ್ತಿಯ ಸೊಂಡೆಕೊಪ್ಪ ರಸ್ತೆಯ ೨ ಬದಿಯಲ್ಲೂ ಅನಧಿಕೃತವಾಗಿ ಅಂಗಡಿಗಳು ಮತ್ತು ಶೇಡ್ಗಳು ನಿರ್ಮಾಣವಾಗಿದೆ. ಈ ಹಿನ್ನೆಲೆ ಸೊಂಡೆಕೊಪ್ಪ ರಸ್ತೆಯಲ್ಲಿ ವೃದ್ಧರು, ಹೆಣ್ಣು ಮಕ್ಕಳು ಓಡಾಡುವುದೇ ಕಷ್ಟವಾಗಿದೆ. ಈ ರಸ್ತೆಯಲ್ಲಿ ವಾಹನ ದಟ್ಟಣೆ ಬಲು ಜೋರಾಗಿದ್ದು, ರಸ್ತೆಯ ೨ ಬದಿಯಲ್ಲಿ ಅಂಗಡಿ ಮುಂಗಟ್ಟು ಇರುವುದರಿಂದ ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯರು ಕಾಲೇಜಿಗೆ ತೆರಳಲು ಹರ ಸಾಹಸ ಪಡುವಂತಹ ಪರಿಸ್ಥಿತಿಯು ಇಲ್ಲಿ ನಿರ್ಮಾಣವಾಗಿದೆ.
ಸಾಕಷ್ಟು ಬಾರಿ ಈ ಕುರಿತಂತೆ ಅಧಿಕಾರಿಗಳು, ಪೊಲೀಸರಿಗೆ ದೂರು ನೀಡಿದ್ರು. ಯಾವುದೇ ಉಪಯೋಗವಾಗಿಲ್ಲ. ಇವತ್ತು ವಿದ್ಯಾರ್ಥಿಗಳು ಶಾಸಕ ಶ್ರೀನಿವಾಸಮೂರ್ತಿ ಹತ್ತಿರ ತಮ್ಮ ನೋವನ್ನು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ನೆಲಮಂಗಲದಲ್ಲಿ ಶ್ರೀನಿವಾಸ್ ಮೂರ್ತಿ ಮಾತನಾಡಿ, ಕೂಡಲೇ ಈ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದರು.