ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇವತ್ತು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ಕೊಟ್ಟದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಎರಡು ದಿನ ಭಾರೀ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ರಾಜ್ಯದಲ್ಲಿ ನೈಋತ್ಯ ಮುಂಗಾರು ಅಂತ್ಯವಾಗಿದೆ. ಆದ್ರೆ ಚಂಡಮಾರುತದ ಪ್ರಭಾವ ಇದ್ದು ಆ ಕಾರಣದಿಂದ ೨ ದಿನಗಳ ಕಾಲ ಮಳೆಯಾಗಲಿದೆ. ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಕೊಡಗಿನಲ್ಲಿ ಮಂಗಳವಾರ ಮತ್ತು ಬುಧವಾರ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ರಾಜ್ಯದಲ್ಲಿ ಇಷ್ಟು ದಿನಗಳ ಕಾಲ ಬಿರುಸಿನ ಮಳೆ ಸುರಿದ್ರು ಕೂಡ ಈ ಬಾರಿ ರಾಜ್ಯದಲ್ಲಿ ಒಟ್ಟಾರೆಯಾಗಿ ೮% ಮಳೆ ಕೊರತೆಯೊಂದಿಗೆ ಮುಂಗಾರು ಅವಧಿ ಅಂತ್ಯವಾಗುತ್ತಿದೆ ಎಂಬ ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ.
ಆಗಸ್ಟ್ ತಿಂಗಳಿನಲ್ಲಿ ೪೭% ಮಳೆ ಕೊರತೆ ಉಂಟಾಗಿತ್ತು. ಸೆಪ್ಟೆಂಬರ್ ತಿಂಗಳಿನಲ್ಲಿ ಅಧಿಕ ಮಳೆಯಾಗಿದ್ದು, ರಾಜ್ಯದಲ್ಲಿ ಒಟ್ಟಾರೆ ೮% ಮಳೆ ಕೊರತೆಯಾಗಿದೆ ಎಂದು ಹೇಳಲಾಗುತ್ತಿದೆ. ೨ ದಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯಪುರ, ಧಾರವಾಡ, ಗದಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಮಂಡ್ಯ ಸೇರಿದಂತೆ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ನಿರೀಕ್ಷೆ ಇದೆ ಎನ್ನಲಾಗಿದೆ.
ಕಳೆದ ಜೂನ್, ಜುಲೈ ತಿಂಗಳಲ್ಲಿ ಅಬ್ಬರಿಸಿದ್ದ ಮಳೆರಾಯ, ಆಗಸ್ಟ್ ತಿಂಗಳಲ್ಲಿ ಕೊಂಚ ಕಡಿಮೆ ಮಾಡಿದ್ದ. ಈಗ ಮತ್ತೆ ಸೆಪ್ಟೆಂಬರ್ ಪ್ರಾರಂಭದಿಂದಲೇ ಮಳೆರಾಯನ ಅಬ್ಬರ ಜೋರಾಗಿತ್ತು, ಇದೀಗ ಮತ್ತೆ ೨ ದಿನಗಳ ಭಾರೀ ಮಳೆಯ ನಿರೀಕ್ಷೆ ಇದ್ದು, ನಂತರ ಮುಂಗಾರು ಅಂತ್ಯವಾಗಲಿದೆ ಎಂದು ಹೇಳಲಾಗುತ್ತಿದೆ.