ಬೆಂಗಳೂರು: ರಾಜ್ಯದ 13 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. 466 ಗ್ರಾಮಗಳಲ್ಲಿ ತೊಂದರೆ ಉಂಟಾಗಿದೆ. 13 ಜನರು ಪ್ರವಾಹಕ್ಕೆ ಬಲಿಯಾಗಿದ್ದಾರೆ. ಸಂಪರ್ಕ ರಸ್ತೆ, ಸೇತುವೆ ದುರಸ್ತಿಗೆ ಸಭೆ ಮಾಡಿದ್ದೇನೆ. ಅಧಿಕಾರಿಗಳ ಜತೆ ಸಭೆ ಮಾಡಿದ್ದೇನೆ. ಪರಿಹಾರ ಕೆಲಸಕ್ಕೆ ರಾಜ್ಯ ಸರ್ಕಾರದಿಂದ 510 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಎನ್ಡಿಆರ್ಎಫ್ನಿಂದ 150 ಕೋಟಿ ರೂಪಾಯಿ ಖರ್ಚು ಮಾಡಲು ತೀರ್ಮಾನ ಮಾಡಲಾಗಿದೆ. 700 ಕೋಟಿಗೂ ಹೆಚ್ಚು ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ. ತುರ್ತು ಕಾಮಗಾರಿಗೆ 600 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಮನೆ, ಬೆಳೆ ನಾಶ ಬಗ್ಗೆ 15 ದಿನದಲ್ಲಿ ಸಮೀಕ್ಷೆಗೆ ಸೂಚನೆ ನೀಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಮನೆ ಕಳೆದುಕೊಂಡವರಿಗೆ 10 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ರಾಜ್ಯದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಮನೆ ಸಂಪೂರ್ಣ ಹಾನಿಯಾಗಿದ್ದರೆ 5 ಲಕ್ಷ ರೂಪಾಯಿ ಹಾಗೂ ಭಾಗಶಃ ಹಾನಿಯಾಗಿದ್ದರೆ 3 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಅಲ್ಪ ಹಾನಿಗೆ 50 ಸಾವಿರ ರೂಪಾಯಿ ನೀಡಲಾಗುತ್ತಿದೆ. ಈಗಲೂ ಅದೇ ರೀತಿ ಪರಿಹಾರ ಹಣ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.ಕಳೆದ ವರ್ಷದ ಬಾಕಿ ಪರಿಹಾರ ಹಣ ಬಿಡುಗಡೆ ಮಾಡ್ತೇವೆ ಎಂದೂ ಈ ವೇಳೆ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಬೆಳೆ ಹಾನಿ ಸಮೀಕ್ಷೆಗೆ ತಂಡವನ್ನು ಕಳಿಸಲು ಕೇಂದ್ರ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ನೆರೆ ಸಂತ್ರಸ್ತರಿಗೆ ಪರಿಹಾರ ನೀಡದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ನೆರೆ ವಿಚಾರದಲ್ಲಿ ನಮ್ಮ ಸರ್ಕಾರ ಶೀಘ್ರವಾಗಿ ಸ್ಪಂದಿಸಿದೆ. ಅಗತ್ಯ ಪರಿಹಾರವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಅವರ ಕಾಲದಲ್ಲಿ ಏನಾಗಿತ್ತು ಎಂದು ನಾನು ಮಾತಾಡಬಹುದು. ಅವರ ಕಾಲದಲ್ಲಿ ಎಷ್ಟು ವಿಳಂಬ ಆಗಿತ್ತು ಎಂಬ ಮಾಹಿತಿ ಇದೆ ಎಂದು ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.