ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣವಚನ ತೆಗೆದುಕೊಂಡು ನಂತರ ಸಿಎಂ ಬಸವರಾಜ್ ಬೊಮ್ಮಾಯಿ ಎರಡು ದಿನಗಳ ಕಾಲ ದೆಹಲಿಯಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಸಿಎಂ ಸಾಹೇಬ್ರು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಆದ್ರೆ ಸಂಪುಟ ರಚನೆಗೆ ಸಂಬಂಧಿಸಿದಂತೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಆದ್ರೆ ಮತ್ತೆ ಪೋನ್ ಬಂದ್ರೆ ದೆಹಲಿಗೆ ವರಿಷ್ಠರನ್ನ ಭೇಟಿ ಮಾಡಿ ಸಚಿವ ಸಂಪುಟದ ರಚನೆ ಬಗ್ಗೆ ಮಾತನಾಡ್ತಿನಿ ಅಂತ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಹಿಂದೆ ತೆರಳಿದ ವೇಳೆ ಯಾವುದೇ ಪಟ್ಟಿಯನ್ನ ಮುಂದಿಟ್ಟುಕೊಂಡು ಒಪ್ಪಿಗೆ ಪಡೆಯೋಕೆ ಪ್ರಯತ್ನ ನಡೆಸಿಲ್ಲ ಎಂದು ಹೇಳಿದ್ದ ಸಿಎಂ ಇದೀಗ ಮತ್ತೆ ತಾನು ಸೋಮವಾರ ದೆಹಲಿಗೆ ಹೋಗಬಹುದು. ಆದಷ್ಟು ಬೇಗ ಕ್ಯಾಬಿನೆಟ್ ರಚನೆ ಮಾಡ್ತೀನಿ. ಜಾಸ್ತಿ ಟೈಂ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ. ಈ ಬಾರಿಯಾದರೂ ಬಿಜೆಪಿ ಹೈಕಮಾಂಡ್ ಸಿಎಂ ಬೊಮ್ಮಾಯಿಗೆ ಗ್ರೀನ್ ಸಿಗ್ನಲ್ ನೀಡಿತ್ತಾ ಎಂದು ಕಾದು ನೋಡಬೇಕು.
ಇನ್ನು ಯಡಿಯೂರಪ್ಪ ಅವರ ಕೃಪೆಯಿಂದ ಕರ್ನಾಟಕದ ನೂತನ ಸಿಎಂ ಆದ ಬೆನ್ನಲ್ಲೇ ಕೃತಜ್ಙತೆ ಸಲ್ಲಿಸೋಕೆ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ಹೋಗಿದ್ದರು. ದೆಹಲಿಯಲ್ಲಿ ಬಿಜೆಪಿ ವರಿಷ್ಠರಾದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ ಹಾಗೂ ಬಿಜೆಪಿ ರಾಷ್ತ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನ ಭೇಟಿ ಮಾಡಿದ್ದರು. ವರಿಷ್ಠರ ಬಳಿ ಸಂಪುಟ ರಚನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದರು. ಸಿಎಂ ಕೊಂಡೊಯ್ದಿದ್ದ 25 ಆಕಾಂಕ್ಷಿಗಳ ಪಟ್ಟಿಯನ್ನ ಮುಂದಿಟ್ಟು, ತಾವು ಅವಕಾಶ ಕೊಟ್ಟರೆ ಕರ್ನಾಟಕದಲ್ಲಿ ಹೈ ಕಮಾಂಡ್ ಸಲಹೆಯೊಂದಿಗೆ ಉತ್ತಮ ಆಡಳಿತ ನಡೆಸುತ್ತೇನೆಂದು ಬೊಮ್ಮಾಯಿ ಮನವಿ ಮಾಡಿದರೆನ್ನಲಾಗಿದೆ.
ಸಿಎಂ ಇಟ್ಟ ಪಟ್ಟಿಗೆ ಹೈಕಮಾಂಡ್ ಸದ್ಯಕ್ಕೆ ಹಸಿರು ನಿಶಾನೆ ತೋರಿಲ್ಲ. ಓಕೆ ನಮಗೆ ಸ್ವಲ್ಪ ಟೈಂ ಬೇಕಾಗಿದೆ. ನಂತರ ನಿಮ್ಮಗೆ ತಿಳಿಸ್ತೀವಿ. ನೀವು ಚೆನ್ನಾಗಿ ಕೆಲಸ ಮಾಡಿ. ನಾವು ಸಂಪುಟ ಬಗ್ಗೆ ಮಾತಾಡ್ತಿವಿ. ನೀವು ಮತ್ತೊಂದು ಲೀಸ್ಟ್ ಕಳಿಸಿಕೊಡಿ ಎಂದು ವರಿಷ್ಠರು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ದೆಹಲಿಯಿಂದ ಬರಿಗೈಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಾಪಸ್ ಆಗಿದ್ದಾರೆ . ಬೊಮ್ಮಾಯಿ ಸಿಎಂ ಆದ ಬೆನ್ನಲ್ಲೇ ಹೈಕಮಾಂಡ್ ಈ ಬಾರಿ ಸಂಪುಟ ರಚನೆಗೆ ಸರಿಯಾದವರನ್ನ ಆಯ್ಕೆ ಮಾಡುವಂತೆ ಸಂದೇಶ ನೀಡಿತ್ತು. ಪ್ರಾದೇಶಿಕ, ಸಾಮಾಜಿಕ ನ್ಯಾಯ ಜೊತೆ ಕ್ಲೀನ್ ಇಮೇಜ್ ಇರುವಂಥವರ ಪಟ್ಟಿ ಕಳಿಸುವಂತೆ ಹೇಳಿತ್ತು. ಅದರಂತೆಯೇ ಬೊಮ್ಮಾಯಿ 25 ಮಂದಿಯ ಪಟ್ಟಿಯನ್ನ ಹಿಡಿದೇ ದೆಹಲಿಗೆ ತಲುಪಿದ್ದರು. ಆದ್ರೆ ಪಟ್ಟಿ ಸರಿಹೋಗದ ಕಾರಣ ಮತ್ತೊಂದು ಲಿಸ್ಟ್ ಕಳಿಸುವಂತೆ ವರಿಷ್ಠರು ಹೇಳಿ ಕಳಿಸಿದ್ದಾರೆ.
ಇದೇ ವೇಳೆ, ಸಂಘಪರಿವಾರದ ಕಡೆಯಿಂದ ಬಿ.ಎಲ್. ಸಂತೋಷ್ ಕೂಡ ಪಟ್ಟಿಯೊಂದನ್ನು ನೀಡಿದ್ದಾರೆ. ಹೈಕಮಾಂಡ್ ಕೂತ ತಮ್ಮದೇ ಮೂಲಗಳಿಂದ ಮತ್ತೊಂದು ಪಟ್ಟಿ ಪಡೆದುಕೊಂಡಿರುವುದು ತಿಳಿದುಬಂದಿದೆ. ಹೀಗಾಗಿ, ಬೊಮ್ಮಾಯಿ ತಂದ ಪಟ್ಟಿಗೆ ವರಿಷ್ಠರು ಕೂಡಲೇ ಒಪ್ಪಿಗೆ ಕೊಟ್ಟಿಲ್ಲ. ನೀವು ಪಟ್ಟಿಯಲ್ಲಿರುವ ಕೆಲವು ಹೆಸರು ಬಿಟ್ಟು ಹೊಸ ಮುಖಗಳಿರುವ ಪಟ್ಟಿ ಕಳಿಸಿ ಎಂದು ಸಿಎಂ ಬೊಮ್ಮಾಯಿಗೆ ಹೈಕಮಾಂಡ್ ಹೇಳಿ ಕಳುಹಿಸಿದೆ. ಹೀಗಾಗಿ ಸಿಎಂ ಬೊಮ್ಮಾಯಿ ಬಂದ ದಾರಿಗೆ ಸುಂಕವಿಲ್ಲದಂತೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಸೋಮವಾರ ಇಲ್ಲವೇ ಮಂಗಳವಾರ ಮತ್ತೊಮ್ಮೆ ದೆಹಲಿಗೆ ತೆರಳಲಿದ್ದಾರೆ. ಈ ವೇಳೆ ಬೇರೆ ಪಟ್ಟಿಯನ್ನ ಅಂತಿಮ ಮಾಡಿಕೊಂಡು ಹೈಕಮಾಂಡ್ ಒಪ್ಪಿಗೆ ಪಡೆದು ಬರೋಕೆ ಮುಂದಾಗಿದ್ದಾರೆ. ಸೋಮವಾರ ಇಲ್ಲವೇ ಮಂಗಳವಾರ ಸಿಎಂ ಬೊಮ್ಮಾಯಿ ದೆಹಲಿಗೆ ಮತ್ತೊಮ್ಮೆ ಭೇಟಿ ನೀಡುವ ಸಾಧ್ಯತೆಯಿದೆ. ಈ ವೇಳೆ ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ, ಆಗಸ್ಟ್ 5 ರಂದೇ ಹೊಸ ಸಂಪುಟ ಅಸ್ತಿತ್ವಕ್ಕೆ ಬರುವ ಸಾಧ್ಯತೆಯಿದೆ. ಸಾಮಾಜಿಕ ನ್ಯಾಯ ಹಾಗೂ ಪ್ರಾದೇಶಿಕತೆಗೆ ಈ ಬಾರಿ ಒತ್ತು ಸಿಗಲಿದೆ ಎನ್ನಲಾಗ್ತಿದೆ. ಒಟ್ಟಾರೆ ಬೊಮ್ಮಾಯಿ ಸಂಪುಟದಲ್ಲಿ ಯಾರು ಸಚಿವರಾಗ್ತಾರೆ ಅನ್ನೋದು ಬಹಳಷ್ಟು ಕುತೂಹಲ ಮೂಡಿಸಿದೆ.