ಬೆಳಗಾವಿ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಆರಂಭವಾಗಿದೆ, ತಮ್ಮ ಕ್ಯಾಬಿನೆಟ್ ಸಚಿವರನ್ನು ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿಗಳಿಗೆ ಸಮಯಾವಕಾಶ ನೀಡಿದೆ ಎನ್ನಲಾಗಿದೆ. ಎರಡು ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯ ವಾಗಿದೆ. ಯಡಿಯೂರಪ್ಪ ಅವರ ಸಂಪುಟದಲ್ಲಿದ್ದ ಹಲವು ಹಿರಿಯ ಸಚಿವರು ಮತ್ತೆ ಬೊಮ್ಮಾಯಿ ಸಂಪುಟಕ್ಕೆ ಸೇರುವ ಸಾಧ್ಯತೆಯಿದೆ,
38 ಲಿಂಗಾಯತ ಶಾಸಕರಿದ್ದು, ಅವರೆಲ್ಲಾ ಆರ್ ಎಸ್ ಎಸ್ ಮುಖಂಡರ ಜೊತೆ ಸಂಪರ್ಕದಲ್ಲಿದ್ದು, ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ, ಯಡಿಯೂರಪ್ಪ ಅವರು ತಮ್ಮ ಆಪ್ತರಾದ ಸಿ ಸಿ ಪಾಟೀಲ್, ಉಮೇಶ್ ಕತ್ತಿ, ಮಾಧುಸ್ವಾಮಿ, ಸುರೇಶ್ ಕುಮಾರ್, ಹಾಲಪ್ಪ ಆಚಾರ್ ಮತ್ತು ತಿಪ್ಪಾರೆಡ್ಡಿ ಅವರನ್ನು ಹೊಸ ಕ್ಯಾಬಿನೆಟ್ಗೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ವಂಚತರಾಗಿದ್ದ ಹಾವೇರಿಯ ನೆಹರು ಓಲೇಕಾರ್, ರಾಯಭಾಗದ ದುರ್ಯೋಧನ ಐಹೊಳೆ, ಮಹಾಂತೇಶ ಕವಟಗಿಮಠ, ಅಭಯ ಪಾಟೀಲ್ ಮತ್ತು ಅನಿಲ್ ಬೆನಕೆ, ಮಹೇಶ್ ಕುಮಟಳ್ಳಿ, ಪಿ ರಾಜೀವ್, ಆನಂದ್ ಮಾಮನಿ ಸಚಿವ ಸ್ಥಾನಕ್ಕಾಗಿ ಹೈಲೆವಲ್ ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇನ್ನು ರಮೇಶ್ ಜಾರಕಿಹೊಳಿ ಸಹೋದರ ಅರಭಾವಿ ಎಂಎಲ್ಎ ಬಾಲಚಂದ್ರ ಜಾರಕಿಹೊಳಿ ಅವರನ್ನು ಬೊಮ್ಮಾಯಿ ಸಂಪುಟಕ್ಕೆ ಸೇರಿಸಬೇಕೆಂದು ಒತ್ತಾಯ ಕೇಳಿ ಬರುತ್ತಿದೆ.ಬಹುತೇಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ.
ಮತ್ತು ಬಿಜೆಪಿಯ ಹಿರಿಯ ಶಾಸಕ ಉಮೇಶ್ ಕತ್ತಿ ಅವರು, ಈ ಹಿಂದೆ ಅನೇಕ ಖಾತೆ ನಿರ್ವಹಿಸಿದ ಅನುಭವ ಇರುವುದರಿಂದ ಸಂಪುಟಕ್ಕೆ ಸೇರುವ ವಿಶ್ವಾಸವಿದೆ. ಹೊಸ ಕ್ಯಾಬಿನೆಟ್ನಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ ಎಂದು ಹೇಳಿದರು. ಯಡಿಯೂರಪ್ಪನವರೊಂದಿಗಿನ ಅವರ ನಿಕಟ ಸಂಪರ್ಕವು ಅವರಿಗೆ ಹೆಚ್ಚುವರಿ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.
ಹಲವಾರು ಯುವ ಶಾಸಕರ ಬೆಂಬಲಿಗರು ಸಚಿವ ಸ್ಥಾನ ನೀಡುವಂತೆ ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿಗೆ ಮನವಿ ಮಾಡಿದೆ. ಬೆಳಗಾವಿ ಶಾಸಕ ಅನಿಲ್ ಬೆನಕೆ ಅವರ ಬೆಂಬಲಿಗರು ,ಅವರನ್ನು ಮರಾಠ ಕೋಟಾದ ಅಡಿಯಲ್ಲಿ ಸಂಪುಟಕ್ಕೆ ಸೇರಿಸಬೇಕೆಂದು ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ. ಒಟ್ಟಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ಸೇರಲು ಹಲವಾರು ಶಾಸಕರು ಸರ್ಕಸ್ ನಡೆಸುತ್ತಿದ್ದಾರೆ. ಆದರೆ ಸಚಿವ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ..