ಬೆಂಗಳೂರು: ಇನ್ನೊಂದು ವಾರದೊಳಗೆ ತಮ್ಮ ನೆತೃತ್ವದ ಸಚಿವ ಸಂಪುಟ ರಚನೆ ಆಗುವ ವಿಶ್ವಾಸವನ್ನು ನೂತನ ಸಿಎಂ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದ್ದಾರೆ. ನಿನ್ನೆ ಶುಕ್ರವಾರ ಸಂಜೆ ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ, ಕೊರೋನಾ ಮತ್ತು ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ಶೀಘ್ರ ಸಚಿವ ಸಂಪುಟ ರಚನೆಯಾಗಬೇಕು ಎನ್ನುವ ವಿಷಯವನ್ನು ಪಕ್ಷದ ಹೈಕಮಾಂಡ್‌ಗೆ ತಿಳಿಸಿದ್ದೇನೆ. ಇದಕ್ಕೆ ಹೈಕಮಾಂಡ್ ಸಕಾರಾತ್ಮಕವಾಗಿ ವರ್ತಿಸಿದೆ. ಇಂದು ಶನಿವಾರ ಸಂಜೆಯ ವೇಳೆಗೆ ಸಂಪುಟ ರಚನೆ ಕುರಿತಾಗಿ ಹೈಕಮಾಂಡ್‌ನಿಂದ ಸ್ಪಷ್ಟ ಮಾಹಿತಿ ಬರುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ಇದೆ ವೇಳೆ ಮಾತನಾಡಿದ ಅವರು ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿ ದೆಹಲಿಗೆ ಭೇಟಿ ನೀಡಿದ್ದೇನೆ. ಪ್ರಧಾನಮಂತ್ರಿಗಳು, ಕೇಂದ್ರ ಸಚಿವರು ಹಾಗೂ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ್ದೇನೆ ಎಂದಿದ್ದಾರೆ. ಇನ್ನು ಪ್ರಧಾನಿಯವರಂತೂ ಸುಮಾರು 30 ರಿಂದ 40 ನಿಮಿಷಗಳ ವರೆಗೆ ಹಲವು ವಿಷಯಗಳ ಬಗ್ಗೆ ನನ್ನೊಂದಿಗೆ ಮಾತುಕತೆ ನಡೆಸಿ ಕಿವಿಮಾತು ಹೇಳಿದ್ದಾರೆ. ರಾಜ್ಯದ ಕೆಲ ಯೋಜನೆಗಳು, ಸರ್ಕಾರಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆಯೂ ಮಾತುಕತೆ ನಡೆಸಿದ್ದೇನೆ. ಸಚಿವ ಸಂಪುಟ ರಚನೆ ಕುರಿತಾಗಿ ಯಾವುದೇ ಸಮಾಲೋಚನೆ ನಡೆದಿಲ್ಲ. ಆ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಉಳಿದಂತೆ ಸಂಪುಟ ರಚನೆ ವಿಳಂಬವಾಗುತ್ತಿರುವ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ ಎಂಬ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಸಚಿವರ ಪಟ್ಟಿ ಅಂತಿಮಗೊಳಿಸುವ ಬಗ್ಗೆ ಬಿಜೆಪಿ ವರಿಷ್ಠರಿಂದ ಇವತ್ತು ಸಂದೇಶ ಬರಲಿದೆ. ನಾನು ಮತ್ತೊಮ್ಮೆ ದೆಹಲಿಗೆ ಭೇಟಿ ನೀಡಬಹುದು ಅಥವಾ ಬೆಂಗಳೂರಿನಿಂದಲೇ ದೂರವಾಣಿ ಮೂಲಕ ಚರ್ಚಿಸಬಹುದು ಎಂದಿದ್ದಾರೆ. ಹೀಗಾಗಿ ಇನ್ನೊಂದು ವಾರದೊಳಗೆ ಸಚಿವ ಸಂಪುಟ ರಚನೆ ನಿಶ್ಚಿತ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಸಿಎಂ ಬೊಮ್ಮಾಯಿ ಪುನರಿಚ್ಚರಿಸಿದ್ದಾರೆ.