ಕೂಗು ನಿಮ್ಮದು ಧ್ವನಿ ನಮ್ಮದು

ಪ್ರವಾಹದ ಮಳೆಗೆ ಕೊಚ್ಚಿ ಹೋದ ಪೂರ ಗ್ರಾಮದ ಸಂಪರ್ಕ ಸೇತುವೆ

ಖಾನಾಪುರ: ಕಳೆದವಾರ ಸತತ ನಾಲ್ಕು ದಿನ ಸುರಿದ ಧಾರಾಕಾರ ಮಳೆಗೆ ಖಾನಾಪುರ ತಾಲೂಕಿನಾದ್ಯಂತ ಮಹಾಪೂರವೇ ಉದ್ಭವವಾಗಿದೆ. ಈ ಮಳೆಯಲ್ಲಿ ತಾಲೂಕಿನ ಸುಮಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಗೂ ಸೇತುವೆಗಳು ಕೊಚ್ಚಿಕೊಂಡು ಹೋಗಿದ್ದು ಕೋಟ್ಯಾಂತರ ರೂಪಾಯಿ ಹಾನಿಯಾಗಿದೆ.

ಇಂತಹದರಲ್ಲಿ ಲಿಂಗನಮಠ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೊನೆಯ ಹಳ್ಳಿಯಾದ ಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಅಳ್ನಾವರ-ಪೂರ ಸಂಪರ್ಕ ಸೇತುವೆಯು ಸಂಪೂರ್ಣವಾಗಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿರುವುದರಿಂದ ಜನಸಾಮಾನ್ಯರಿಗೆ ನಡೆದುಕೊಂಡು ಹೋಗಲು ಸಹ ಬಾರದಂತಹ ಪರಿಸ್ಥಿತಿ ಉಂಟಾಗಿದೆ.

ಈ ಸೇತುವೆಯು ಕಳೆದ ಎರಡು ವರ್ಷದ ಹಿಂದೆ ಅಂದರೆ 2019ರ ಸಾಲಿನಲ್ಲಿ ಉಂಟಾದ ಪ್ರವಾಹದ ಪರಿಸ್ಥಿತಿಯಲ್ಲೂ ಕೂಡ ಇದೇ ಪರಿಸ್ಥಿತಿ ಎದುರಾಗಿತ್ತು. ಅಂದು ಖಾನಾಪುರದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ವಿಧಾನಸಭೆ ಸದನದಲ್ಲಿ ಈ ಸೇತುವೆ ಬಗ್ಗೆ ಧ್ವನಿಯೆತ್ತಿ ಸೇತುವೆಯು ಅಳ್ನಾವರ ಭಾಗಕ್ಕೆ ಸೇರಿರುವುದರಿಂದ ಅಲ್ಲಿನ ಶಾಸಕರಾದ ಸಿ. ಎಮ್. ನಿಂಬಣ್ಣವರ್ ಅವರು ಅಂದಾಜು 34 ಲಕ್ಷ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಮಾಡಲಾಗಿತ್ತು.

ಸದ್ಯದ ಪರಿಸ್ಥಿತಿಯಲ್ಲಿ ಗುಣಮಟ್ಟದ ಕಾಮಗಾರಿ ಆಗದೇ ಇರುವುದರಿಂದ ಈ ವರ್ಷದ ಮಳೆಗೆ ಸೇತುವೆಯು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಸೇತುವೆಯು ಸಂಪೂರ್ಣವಾಗಿ ಮರು ನಿರ್ಮಾಣವಾಗಬೇಕು ಅಂದಾಗ ಮಾತ್ರ ಜನಸಾಮಾನ್ಯರಿಗೆ ಸೇತುವೆಯ ಮುಖಾಂತರ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತದೆ. ಈಗ ಸೇತುವೆ ಮರು ನಿರ್ಮಾಣವಾಗಲು ಅಂದಾಜು 01 ಕೋಟಿ ರೂಪಾಯಿ ಅವಶ್ಯಕತೆ ಇದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಪಾಂಡುರಂಗ ಪಾಟೀಲ್ ಆಗ್ರಹಿಸಿದ್ದಾರೆ.

ಈಗಾಗಲೇ ಈ ಹಾನಿಯಾದ ಸೇತುವೆಯ ಸ್ಥಳಕ್ಕೆ ಖಾನಾಪುರ ತಹಸಿಲ್ದಾರ್ ರೇಷ್ಮಾ ತಾಳಿಕೋಟಿ ಹಾಗೂ ಅಳ್ನಾವರ ತಹಸೀಲ್ದಾರ್ ಅಮರೇಶ ಪಮ್ಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತದನಂತರ ಅವರು ತಮ್ಮ ತಾಲೂಕಿನ ಲೋಕೋಪಯೋಗಿ ಇಲಾಖೆ ಮತ್ತು ತಾಲೂಕ ಪಂಚಾಯತ್ ಇಲಾಖೆಯವರಿಗೆ ಮಾಹಿತಿಯನ್ನು ತಿಳಿಸಿರುತ್ತಾರೆ.

ಈ ಪ್ರಕರಣದ ಸಲುವಾಗಿ ಖಾನಾಪುರ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ಹಾಲಮ್ಮನವರ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕಾರ್ಯದ ಬಗ್ಗೆ ಆದಷ್ಟು ಬೇಗ ಮಾಡುವ ಭರವಸೆಯನ್ನು ಗ್ರಾಮಸ್ಥರಿಗೆ ಹಾಗೂ ಗ್ರಾಮ ಪಂಚಾಯಿತಿ ಅವರಿಗೆ ನೀಡಿರುತ್ತಾರೆ.

ವರದಿ: ಕಾಶಿಮ್ ಹಟ್ಟಿಹೊಳಿ.

error: Content is protected !!