ಕೂಗು ನಿಮ್ಮದು ಧ್ವನಿ ನಮ್ಮದು

ಮಾಜಿ ಸಿಎಂ ರಾಜಾಹುಲಿ ಯಡಿಯೂರಪ್ಪ ಸುತ್ತ! ಮಂತ್ರಿ ಆಕಾಂಕ್ಷಿಗಳ ಪ್ರದಕ್ಷಿಣೆ

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಆದರೂ ಕೂಡ ಯಡಿಯೂರಪ್ಪ ರಾಜ್ಯ ಬಿಜೆಪಿಯ ಪವರ್ ಸೆಂಟರ್ ಆಗಿ ಹೊರಹೊಮ್ಮಿದ್ದಾರೆ. ಡಿಸಿಎಂ ಹುದ್ದೆ ಬಯಸಿ, ಮಂತ್ರಿಗಿರಿಯ ಪದವಿ ಅರಸಿ ಕಾವೇರಿ ನಿವಾಸಕ್ಕೆ ಶಾಸಕರು ಎಡತಾಕುತ್ತಿದ್ದಾರೆ. ಮಂತ್ರಿಯಾಗಬೇಕೆಂಬ ಮಹದಾಸೆ ಇಟ್ಟುಕೊಂಡ ಅನೇಕರು ಯಡಿಯೂರಪ್ಪ ಮೂಲಕ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದ್ದಾರೆ. ಯಡಿಯೂರಪ್ಪ ಅವರ ಆಶೀರ್ವಾದದಿಂದಲೇ ಬಸವರಾಜ ಬೊಮ್ಮಾಯಿ ಸಿಎಂ‌ ಆಗಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ.

ಬೆಳಗ್ಗೆಯಿಂದ ಸಂಜೆಯವರೆಗೂ ಸಚಿವ ಸ್ಥಾನಕ್ಕಾಗಿ ಹಲವಾರು ಶಾಸಕರು ಯಡಿಯೂರಪ್ಪ ದುಂಬಾಲು ಬಿದ್ದಿದ್ದಾರೆ. ಅದರಲ್ಲೂ ಯಡಿಯೂರಪ್ಪ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಹೊನ್ನಾಳಿಯ ಎಂ.ಪಿ.ರೇಣುಕಾಚಾರ್ಯ, ವಿರೂಪಾಕ್ಷಪ್ಪ ಬಳ್ಳಾರಿ, ಜೀವರಾಜ್, ಪ್ರೀತಂಗೌಡ ಸೇರಿ ಅನೇಕರು ಸಚಿವ ಸ್ಥಾನಕ್ಕಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಸಿಎಂ ಸ್ಥಾನದ ಪ್ರಬಲ ಪೈಪೋಟಿಯಲ್ಲಿದ್ದ ಮುರುಗೇಶ್ ನಿರಾಣಿ, ಇದೀಗ ಸಚಿವ ಸ್ಥಾನ ಪಡೆಯಲು ಪ್ರಯಾಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ಬಸವರಾಜ ಬೊಮ್ಮಾಯಿಗಿಂತ ಮೊದಲು ಮುಖ್ಯಮಂತ್ರಿ ರೇಸ್‌ನಲ್ಲಿ ನಿರಾಣಿ ಹೆಸರೇ ಇತ್ತು ಎನ್ನಲಾಗಿದೆ. ಹೈಕಮಾಂಡ್ ಕೂಡ ನಿರಾಣಿ ಪರ ಒಲವು ವ್ಯಕ್ತಪಡಿಸಿತ್ತು. ಕೊನೆ ಘಳಿಗೆಯಲ್ಲಿ ಸಚಿವ ಸ್ಥಾನ ತಪ್ಪಿದ್ದು ನಿರಾಣಿಗೆ ಶಾಕ್ ತಂದಿತ್ತು. ಸಿಎಂ ಸ್ಥಾನ ಲಿಂಗಾಯತ ಸಮುದಾಯಕ್ಕೆ ನೀಡಿರುವುದರಿಂದ ಡಿಸಿಎಂ ಸ್ಥಾನ ಅದೇ ಸಮುದಾಯಕ್ಕೆ ನೀಡಲು ಸಾಧ್ಯವಿಲ್ಲ. ಇದನ್ನು ಅರಿತಿರುವ ನಿರಾಣಿ ಇದೀಗ ಮಂತ್ರಿಗಿರಿಗಾಗಿ ಗಿರಿಕಿ ಹೊಡೆಯುತ್ತಿದ್ದಾರೆ.

ಇನ್ನು ಯಡಿಯೂರಪ್ಪ ಸರ್ಕಾರ ಬರಲು ಕಾರಣರಾಗಿದ್ದ ವಲಸಿಗರಿಗೂ ಸಂಪುಟದಿಂದ ಕೈಬಿಡುವ ಆತಂಕ ಆರಂಭವಾಗಿದೆ. ಬೊಮ್ಮಾಯಿ ಸಂಪುಟದಲ್ಲಿ ಮುಂದುವರಿಯಲೇಬೇಕೆಂದು ಸಾಕಷ್ಟು ಲಾಬಿ ಮಾಡುತ್ತಿದ್ದಾರೆ. ಯಡಿಯೂರಪ್ಪ ನಿವಾಸ ಕಾವೇರಿಗೂ ಅನೇಕ ಬಾರಿ ಭೇಟಿ ಕೊಡುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ‌ ಮನವಿ ಮಾಡುತ್ತಿರುವ ವಲಸಿಗ ಶಾಸಕರು, ಸಂಪುಟದಲ್ಲಿ ಸ್ಥಾನ ಸಿಗುವಂತೆ ನೋಡಿಕೊಳ್ಳಿ, ನಿಮ್ಮ ಬೆಂಬಲಕ್ಕೆ ನಾವು ಬಂದಿದ್ದೇವೆ. ನಮ್ಮ ಬೆಂಬಲಕ್ಕೆ ನೀವು ನಿಂತುಕೊಳ್ಳಿ ಎಂದು ದುಂಬಾಲು ಬಿದ್ದಿದ್ದಾರೆ.

error: Content is protected !!