ಬೆಂಗಳೂರು: ಸಂಪುಟ ರಚನೆ ವೇಳೆ ಎಲ್ಲಾ ಸಮುದಾಯದ ಶಾಸಕರಿಂದ ಒತ್ತಡ ಬರುವುದು ಸಹಜ, ಎಲ್ಲರಿಗೂ ಪ್ರಾತಿನಿಧ್ಯ ನೀಡುವುದು ಎಲ್ಲರನ್ನೂ ಸಮಾಧಾನಗೊಳಿಸಿ, ಪ್ರಾದೇಶಿಕ ಸಮತೋಲನ ಕಾಪಾಡಿಕೊಂಡು ಸಚಿವ ಸಂಪುಟ ರಚನೆ ಮಾಡುವುದು ಸವಾಲಿನ ಕೆಲಸ ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ನನಗೆ ಈಗ ತಕ್ಷಣಕ್ಕೆ ಮಳೆ ಪ್ರವಾಹ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡು ಮುಂದಿನ ಕೆಲಸ ಮಾಡುವುದು, ಮಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಇದಕ್ಕಾಗಿ ಇಂದು ಉತ್ತರ ಕರ್ನಾಟಕ ಮತ್ತು ಉತ್ತರ ಕನ್ನಡ ಜಿಲ್ಲೆ ಪ್ರವಾಸ ಕೈಗೊಳ್ಳುತ್ತಿದ್ದೇನೆ, ಪ್ರವಾಹ ಪೀಡಿತ ಸ್ಥಳಗಳಿಗೆ ಕೂಡ ಭೇಟಿ ನೀಡುತ್ತೇನೆ ಎಂದರು.
ಇನ್ನು ಬಿಜೆಪಿ ವರಿಷ್ಠರು ಸಮಯ ನೀಡಿದರೆ ದೆಹಲಿಗೆ ಭೇಟಿ ನೀಡಿ ರಾಜ್ಯದ ಬಗ್ಗೆ ಚರ್ಚಿಸುವೆ. ವರಿಷ್ಠರ ಬಳಿ ಭೇಟಿಗೆ ಸಮಯಾವಕಾಶ ಕೇಳಿದ್ದೇನೆ, ಆದರೆ ಈ ಭೇಟಿ ವೇಳೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುವುದಿಲ್ಲ. ಮುಂದಿನ ಭೇಟಿ ವೇಳೆ ಚರ್ಚಿಸುವೆ. ನಿನ್ನೆ ಪ್ರಧಾನ ಮಂತ್ರಿಯವರು ಕರೆ ಮಾಡಿ ನನಗೆ ಶುಭಾಶಯ ತಿಳಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.ಇದೀಗ ತಮ್ಮ ಆರ್ ಟಿ ನಗರ ನಿವಾಸದಿಂದ ಬೊಮ್ಮಾಯಿಯವರು ಬಿ ಎಸ್ ಯಡಿಯೂರಪ್ಪನವರ ನಿವಾಸಕ್ಕೆ ತೆರಳಿದ್ದು ಅಲ್ಲಿಂದ ಉತ್ತರ ಕನ್ನಡಕ್ಕೆ ಪ್ರವಾಸ ತೆರಳಲಿದ್ದಾರೆ.
ಬಸವರಾಜ ಬೊಮ್ಮಾಯಿಯವರ ಸಂಪುಟಕ್ಕೆ ಸೇರ್ಪಡೆಯಾಗುವುದಿಲ್ಲ ಎಂದು ನಿನ್ನೆ ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದು ನೂತನ ಸಂಪುಟದಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆಯಾ, ನಂತರ ಎದುರಾಗಬಹುದಾದ ಮುಜುಗರದಿಂದ ತಪ್ಪಿಸಿಕೊಳ್ಳಲು ಈಗಲೇ ತಾವಾಗಿಯೇ ಶೆಟ್ಟರ್ ದೂರ ಸರಿದಿದ್ದಾರೆಯೇ, ಬೊಮ್ಮಾಯಿ ಸಿಎಂ ಆಯ್ಕೆ ಅವರಿಗೆ ಸ್ವಲ್ಪ ಮಟ್ಟಿನ ಅಸಮಾಧಾನ ತಂದಿದೆಯೇ, ಇನ್ನೂ ಅನೇಕ ಹಿರಿಯ ನಾಯಕರು ಮುಂದಿನ ದಿನಗಳಲ್ಲಿ ಸಿಡಿದೇಳಲಿದ್ದಾರೆಯೇ ಎಂಬ ಮಾತುಗಳು ಸಹ ಕೇಳಿಬರುತ್ತಿದೆ.