ಬೆಂಗಳೂರು/ಬೆಳಗಾವಿ: ಮಹಾರಾಷ್ಟ್ರದಲ್ಲಿ ಎಡೆ ಬಿಡದೆ ಸುರಿಯುತ್ತಿರುವ ರಣ ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಯು ನಿರ್ಮಾಣವಾಗಿದೆ. ಜೊತೆಗೆ ಊರಿಗೆ ಊರೇ ನೀರಿನಲ್ಲಿ ಮುಳುಗಡೆ ಆಗಿದ್ದು, ರಸ್ತೆ, ಸೇತುವೆ ಜಮೀನುಗಳೆಲ್ಲ ಸಂಪೂರ್ಣವಾಗಿ ಜಲಾವೃತವಾಗಿದೆ. ಇನ್ನೂ ಬೆಳಗಾವಿಯಲ್ಲಂತೂ ಅಕ್ಷರಶಃ ಜಲತಾಂಡವೇ ಆಡ್ತಿದಾನೆ ಮಳೆರಾಯ ಮಾರ್ಕೆಂಡೇಯ, ಹಿರಣ್ಯಕೇಶಿ, ಘಟಪಭಾ ನದಿಗಳ ಅಬ್ಬರಕ್ಕೆ ಗೋಕಾಕ್ ನಗರವೇ ನಡುಗಡ್ಡೆ ಆಗಿದೆ.
ಜೊತೆಗೆ ಗೋಕಾಕ್‍ನ ಮಟನ್ ಮಾರ್ಕೆಟ್ ಬಳಿ ಪ್ರವಾಹದಲ್ಲಿ ಸಿಲುಕಿರುವ ಒಟ್ಟು ೧೨ ಜನರನ್ನು ರಕ್ಷಿಣೆ ಮಾಡಲಾಗಿದೆ. ಜೊತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ NDRF ತಂಡದ ರಕ್ಷಣಾ ಕಾರ್ಯವು ರೋಚಕವಾಗಿದೆ. ಇನ್ನೂ ಚಿಕ್ಕೋಡಿಯ ಹುಕ್ಕೇರಿ ತಾಲೂಕಿನ ಬಡಕುಂದ್ರಿಯಲ್ಲಿ ಹಿರಣ್ಯಕೇಶಿ ನದಿ ಪ್ರವಾಹಕ್ಕೆ ಎಂಭತ್ರೊಬಂತಕ್ಕೂ ಹೆಚ್ಚು ಮನೆಗಳು ಮುಳುಗಡೆ ಆಗಿವೆ. ಜೊತೆಗೆ ಮನೆಗಳ ಛಾವಣಿವರೆಗೂ ನೀರು ನಿಂತಿದೆ. ಇನ್ನೂ ೮೯ ಕುಟುಂಬಗಳಿಗೆ ಬಡಕುಂದ್ರಿ ಗ್ರಾಮದ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ನಿರ್ಮಿಸಲಾಗಿದ್ದು,ಇದರ ಜೊತೆಗೆ ಗ್ರಾಮದ ಸುಪ್ರಸಿದ್ಧ ಹೊಳೆಮ್ಮ ದೇವಸ್ಥಾನವು ಸಹ ಸಂಪೂರ್ಣವಾಗಿ ಮುಳುಗಡೆ ಯಾಗಿದೆ.
ಇನ್ನೂ ಚಿಕ್ಕೋಡಿ ತಾಲೂಕಿನ ಯಡೂರು ವೀರಭದ್ರೇಶ್ವರ ದೇವಾಲಯವು ಸಹಿತ ಸಂಪೂರ್ಣ ಜಲಾವೃತವಾಗಿದೆ. ಇದರ ಮಧ್ಯ ಹೀರಣ್ಯಕೇಶಿ ನದಿಯ ನೀರಿನ ನಡುಗಡ್ಡೆಯಲ್ಲಿ ಸಿಲುಕಿ ಆಹಾರ ವಿಲ್ಲದೇ ಕೋತಿಗಳ ಸ್ಥಿತಿ ಪರದಾಡುವಂತಾಗಿದೆ. ಇನ್ನೂ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಹೀರಣ್ಯಕೇಶಿ ನದಿಯಲ್ಲಂತು ಸುಮಾರು ೧೫ ಕ್ಕೂ ಹೆಚ್ಚು ಕೋತಿಗಳು ಸಿಕ್ಕಿಕೊಂಡಿವೆ. ಕದ್ರಾ ಜಲಾಶಯದಿಂದ ಕಾಳಿ ನದಿಗೆ ಒಂದು ಲಕ್ಷ ೫೮ ಸಾವಿರ ಕ್ಯೂಸೆಕ್ ನೀರು ಹರಿಯಬಿಡಲಾಗ್ತಿದೆ. ಮತ್ತು ಇದ್ರಿಂದ ಕಾರವಾರ ತಾಲೂಕಿನ ಸಿದ್ದರ, ಕಿನ್ನರ, ಖಾರ್ಗಾ, ವೈಲವಾಡ ಗ್ರಾಮಗಳು ಸಹ ಸಂಪೂರ್ಣವಾಗಿ ಮುಳುಗಡೆ ಯಾಗಿವೆ. ಇನ್ನೂ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದಲ್ಲಿ ಗುಡ್ಡ ಕುಸಿತಗೊಂಡಿದೆ.
ಹಾಗಾಗಿ ಅಡಿಕೆ ತೋಟಗಳೆಲ್ಲ ಸಂಪೂರ್ಣವಾಗಿ ನೆಲಸಮವಾಗಿದೆ. ಅಲ್ಲದೇ ಕದ್ರಾ ವ್ಯಾಪ್ತಿಯಲ್ಲಿರುವ ೧೨ ಮನೆಗಳು ಸಹ ನೆಲಸಮವಾಗಿದೆ. ಮಲೆನಾಡಿನ ಭಾಗದಲ್ಲಿ ಮಳೆ ಆಗ್ತಿರುವ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ವರದಾ, ಕುಮುದ್ವತಿ, ತುಂಗಭದ್ರಾ, ಧರ್ಮಾ ನದಿಗಳು ಉಕ್ಕಿ ಹರಿಯತ್ತಿವೆ. ಇದ್ರಿಂದ ರಟ್ಟೀಹಳ್ಳಿ ತಾಲೂಕಿನ ತಿಪ್ಪಾಯಿಕೊಪ್ಪ, ಕುಡುಪಲಿ, ಎಲಿವಾಳ, ಬಡಸಂಗಾಪುರ, ಯಡಗೋಡ ಗ್ರಾಮಗಳ ಸಂಪರ್ಕವು ಕಡಿತಗೊಂಡಿದೆ. ಜೊತೆಗೆ ಮಹಾ ಮಳೆಗೆ ಕಲಬುರಗಿ ಜಿಲ್ಲೆ ಅಕ್ಷರಶಃ ತತ್ತರಿಸಿ ಹೋಗಿದ್ದು, ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಹೊಸಹಳ್ಳಿ ಗ್ರಾಮ ಸಂಪೂರ್ಣ ಜಲಾವೃತವಾಗಿದೆ.
ಜೊತೆಗೆ ಶಿವಮೊಗ್ಗ ಜಿಲ್ಲೆಯಲ್ಲೂ ಪ್ರವಾಹ, ತುಂಗಾ ಡ್ಯಾಂನಿಂದ ತುಂಗಾ ನದಿಗೆ ೭೮ ಸಾವಿರ ಕ್ಯೂಸೆಕ್ ನೀರು ಬಿಡಲಾಗ್ತಿದೆ. ಜೊತೆಗೆ ಶಿವಮೊಗ್ಗ ನಗರದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಸೀಗೆಹಟ್ಟಿ, ಸಿದ್ದೇಶ್ವರ ನಗರ, ಶಾಂತಮ್ಮ ಲೇಔಟ್ ಮತ್ತು ಇಮಾಮ್ ಬಾಡಾ ಬಡಾವಣೆಯು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಮಡಿಕೇರಿ, ಶಿವಮೊಗ್ಗ, ಯಾದಗಿರಿ, ಬಾಗಲಕೋಟೆ, ದಾವಣಗೆರೆಯಲ್ಲೂ ಮಳೆರಾಯನ ಆರ್ಭಟ ಜೋರಾಗಿದೆ. ಮುಂಗಾರು ಜಲತಾಂಡವಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಇತ್ತ ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆಯು ಮಾಹಿತಿ ಕೊಟ್ಟಿದೆ.