ಬೆಳಗಾವಿ: ಭಾರಿ ಮಳೆಗೆ ಕುಂದಾನಗರಿ ಬೆಳಗಾವಿ ಸಂಪೂರ್ಣ ತತ್ತರಿಸಿ ಹೋಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು ಜನಸಾಮಾನ್ಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸತತ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಪ್ರವಾಹದಲ್ಲಿ ಸಿಲುಕಿದ್ದ ಯುವಕನನ್ನು ವಾಘವಡೆ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಬೆಳಗಾವಿ ತಾಲೂಕಿನ ವಾಘವಾಡೆ ಗ್ರಾಮದ ಬಳಿಯಲ್ಲಿ ಈ ಘಟನೆ ನಡೆದಿದ್ದು, ಉಕ್ಕಿ ಹರಿಯುತ್ತಿರೋ ಮಾರ್ಕಂಡೇಯ ನದಿಯಲ್ಲಿ ಸಿಲುಕಿದ್ದ ಬರ್ಮಾ ಪಾಟೀಲ್ ಎಂಬ ವ್ಯಕ್ತಿಯನ್ನು ಹಗ್ಗದ ಮೂಲಕ ರಕ್ಷಣೆ ಮಾಡಿದ್ದು, ಪ್ರವಾಹದಲ್ಲಿ ಈಜಿಕೊಂಡು ದಡ ಸೇರಲು ಹಗ್ಗ ನೇರವಾಗಿದೆ. ಜಮೀನಿನ ಕೆಲಸಕ್ಕೆ ಹೋಗಿದ್ದ ವೇಳೆಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿ ಕೊನೆಗೂ ಮನೆ ಸೇರಿದ್ದಾನೆ.
ಇನ್ನು ಪಶ್ಚಿಮ ಘಟ್ಟ, ಮಹಾರಾಷ್ಟ್ರ, ಬೆಳಗಾವಿ ಜಿಲ್ಲೆಯಲ್ಲಿ ಈ ಧಾರಾಕಾರ ಮಳೆ ಮುಂದುವರೆದಿದ್ದು, ಕಳೆದ ಮೂರು ದಿನಗಳಿಂದ ಬಿಟ್ಟುಬಿಡದೇ ಸುರಿಯುತ್ತಿರುವ ಮಳೆಗೆ ಕೃಷ್ಣಾ, ಧೂದಗಂಗಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ ನದಿಗಳ ಒಳ ಹರಿವು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ 95 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಧೂದಗಂಗಾ ನದಿಯ ಒಳ ಹರಿವು ಹೆಚ್ಚಳ ಹಿನ್ನೆಲೆ ನಿಪ್ಪಾಣಿ ತಾಲೂಕಿನ ಜತ್ರಾಟ ಸೇರಿ ಕೆಲ ಗ್ರಾಮದ ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗುತ್ತಿದೆ. ಕೃಷ್ಣಾ ನದಿ ಪ್ರವಾಹ ಪರಿಸ್ಥಿತಿ ತಗ್ಗಿಸಲು ಹಿಪ್ಪರಗಿ ಬ್ಯಾರೇಜ್, ನಾರಾಯಣಪುರ, ಆಲಮಟ್ಟಿ ಆಣೆಕಟ್ಟುಗಳ ಮೂಲಕ 1 ಲಕ್ಷ ಕ್ಯೂಸೆಕ್ ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ.
ಇಂದು ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಉಳಿದಂತೆ ಚಿಕ್ಕೋಡಿ, ನಿಪ್ಪಾಣಿ, ಖಾನಾಪುರ ತಾಲ್ಲೂಕಿನ ಕೆಲ ಕೆಳಹಂತದ ಸೇತುವೆಗಳು ಜಲಾವೃತಗೊಂಡಿವೆ. ಬೆಳಗಾವಿ ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಇನ್ನು ನಿಪ್ಪಾಣಿಯ ಹತ್ತಿರ ವೇದಗಂಗಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ರಾಷ್ಟ್ರೀಯ ಹೆದ್ದಾರಿ 4 ರ ಮೇಲೆ ಮಹಾರಾಷ್ಟ್ರ ಕಡೆಯಿಂದ ಬರುವ ವಾಹನಗಳನ್ನು ಕೊಗನೊಳ್ಳಿ ಚೆಕ್ ಪೋಸ್ಟ್ ದಿಂದ ವಾಪಸ ಕಳುಹಿಸಲಾಗುತ್ತಿದರ. ರಾಷ್ಟ್ರೀಯ ಹೆದ್ದಾರಿ 4 ರ ಮೇಲೆ ಸುಮಾರು ನಾಲ್ಕು ಅಡಿಯಷ್ಟು ನೀರು ಇರೋದ್ರಿಂದ ಬೆಂಗಳೂರು-ಮುಂಬಯಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 4 ಇದೀಗ ಸಂಪೂರ್ಣ ಬಂದ್ ಆಗಿದೆ.. ಭಾರಿ ಮಳೆಯ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಮಳೆಯ ಅಬ್ಬರಕ್ಕೆ ಖಾನಾಪೂರ ಕಣಕುಂಬಿ, ನಿಲಾವಡೆ ಬ್ರಿಜ್, ಹೆಬ್ಬಾನಟ್ಟಿ ಬ್ರಿಜ್ ರಸ್ತೆ ಸಂಪರ್ಕ ಕಡಿತಗೊಂಡಿದೆ. ಖಾನಾಪೂರ ತಾಲೂಕಿನಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ತಾಲೂಕಿನ ಕಣಕುಂಬಿ, ಜಾಂಬೋಟ್ಟಿ, ಲೋಂಡಾ ಮತ್ತು ನೀಲಾವಡೆ ಬ್ರಿಜ್ ಹಾಗೂ ಹೆಬ್ಬಾನಟ್ಟಿ ಬ್ರಿಜ್ ಗಳ ಮೇಲೆ ನೀರು ಬಂದು ರಸ್ತೆ ಸಂಪರ್ಕ ಕಡಿತಗೊಂಡಿದೆ. ನೀಲಾವಡೆ, ಅಂಬೋಲಿ, ಕಬನಾಳ್ಳಿ ಹೆಬ್ಬಾನಟ್ಟಿ ಗ್ರಾಮಗಳಿಗೂ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಳೆದ ಎರಡು, ಮೂರು ದಿನಗಳಿಂದ ನಿರಂತರವಾಗಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಹಳೆಯ ಮನೆಗಳ ಗೊಡೆಗಳು ಕುಸಿದು ಅವಾಂತರ ಸೃಷ್ಟಿಯಾಗಿದೆ.