ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮೀಸಲು ವಿಧಾನ ಸಭಾ ಕ್ಷೇತ್ರದಿಂದ ಬಹುಜನ ಸಮಾಜ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಎನ್. ಮಹೇಶ್ ಇದೀಗ ಭಾರತೀಯ ಜನತಾ ಪಾರ್ಟಿಯತ್ತ ಮುಖ ಮಾಡಿದ್ದಾರೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರದಲ್ಲಿ ಬೆಂಬಲ ಸೂಚಿಸಿಲ್ಲ ಎನ್ನುವ ಕಾರಣಕ್ಕೆ ಬಹುಜನ ಸಮಾಜ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿದ್ದ ಶಾಸಕ ಎನ್. ಮಹೇಶ್ ಬಿ.ಎಸ್.ಪಿ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು.
ಆದರೆ ಭಾರತೀಯ ಜನತಾ ಪಾರ್ಟಿಯ ವರಿಷ್ಠರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು. ರಾಜ್ಯದಲ್ಲಿರುವ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಚಿವರಾಗುವ ಕನಸು ಹೊಂದಿರುವ ಕೊಳ್ಳೇಗಾಲ ಶಾಸಕ ಎನ್. ಮಹೇಶ್, ಶನಿವಾರ ಕೊಳ್ಳೇಗಾಲ ತಾಲ್ಲೂಕಿನ ಕುರುಬನಕಟ್ಟೆಯಲ್ಲಿ ಅಭಿಮಾನಿ ಕಾರ್ಯಕರ್ತರ ಸಭೆ ಕರೆದಿದ್ದು ಅಲ್ಲಿ ತಾವು ಬಿಜೆಪಿ ಸೇರುವ ಬಗ್ಗೆ ಪ್ರಕಟಿಸಿ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿದ ಬಳಿಕ ಅಂತಿಮ ನಿರ್ಧಾರ ಪ್ರಕಟಿಸಲಿರುವರು ಎನ್ನಲಾಗಿದೆ.
ಈಗಾಗಲೇ ಶಾಸಕ ಎನ್. ಮಹೇಶ್ ರವರು ಬಿಜೆಪಿ ಸರ್ಕಾರದೊಂದಿಗೆ ಬಾಹ್ಯ ಬೆಂಬಲ ನೀಡಿದ್ದಲ್ಲದೆ, ಕ್ಷೇತ್ರದ ಅಭಿವೃದ್ದಿ ಹಾಗೂ ಮುಂದಿನ ದಿನಗಳ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ಸೇರ್ಪಡೆಯಾಗಲಿರುವರು ಎನ್ನಲಾಗುತ್ತಿದೆ.