ಕೂಗು ನಿಮ್ಮದು ಧ್ವನಿ ನಮ್ಮದು

ಬಿಎಸ್ವೈರನ್ನು ಟಾರ್ಗೆಟ್ ಮಾಡಿದರೆ ನಾವೇ ಸುಟ್ಟು ಹೋಗ್ತೀವಿ; ಸಚಿವ ಸಿ.ಪಿ.ಯೋಗೇಶ್ವರ್

ಕೊಪ್ಪಳ: ಯಡಿಯೂರಪ್ಪ ಬೀಳಿಸಲು ರಾಜಕೀಯ ವಿರೋಧಿಗಳು ಒಂದಾಗುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಟಾರ್ಗೆಟ್ ಮಾಡಿದರೆ ನಾವೇ ಸುಟ್ಟು ಹೋಗ್ತೀವಿ ಎಂದು ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.

ಯಡಿಯೂರಪ್ಪ ಪದಚ್ಯುತಿ ಮಾಡುವ ಕೆಲಸ ಮಾಡುತ್ತಿಲ್ಲ. ನಮ್ಮ ಆಂತರಿಕ ಸಮಸ್ಯೆ ಹೇಳಿಕೊಳ್ಳಲು ಹೋಗುತ್ತಿದ್ದೇವೆ. ಡಿ.ಕೆ.ಶಿವಕುಮಾರ್ ಎಂದಿಗೂ ರಾಜಕೀಯ ವಿರೋಧಿಗಳೇ ಎಂದು ತಿಳಿಸಿದರು.
ಪರೀಕ್ಷೆ ಬರೆದು ಉತ್ತರಕ್ಕಾಗಿ ನಾನು ಅಂಜನಾದ್ರಿಗೆ ಭೇಟಿ ನೀಡಿಲ್ಲ. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದ ಯೋಗೇಶ್ವರ್, ಪರೀಕ್ಷೆ ಫಲಿತಾಂಶ ಯಾವಾಗ ಬರತ್ತದೆ ಎಂದು ಗೊತ್ತಿಲ್ಲ. ದೊಡ್ಡವರು ತೀರ್ಮಾನ ಮಾಡುತ್ತಾರೆ ಎಂದರು. ನಾನು, ಬಸನಗೌಡ ಪಾಟೀಲ್ ಯತ್ನಾಳ್ ಸಮಕಾಲೀನರು. ಹೀಗಾಗಿ ಅವರ ಕ್ಷೇತ್ರಕ್ಕೆ ಹೋಗಿ ಭೇಟಿ ಮಾಡಿದ್ದೇನೆ ಎಂದು ತಿಳಿಸಿದರು.

ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗಿರುವುದು ನನಗೆ ಗೊತ್ತಿಲ್ಲ. ಜಾರಕಿಹೊಳಿ ನನಗೆ ಸಿಕ್ಕಿಲ್ಲ. ಆದರೆ ಸಂಪರ್ಕದಲ್ಲಿದ್ದಾರೆ. ಅವರಿಗೆ ಬಿಜೆಪಿಯಲ್ಲಿ ಯಾರು ಅನ್ಯಾಯ ಮಾಡಿದ್ದಾರೆ ಎಂಬುವದನ್ನು ಅವರ ಬಳಿಯೇ ಕೇಳಬೇಕು ಎಂದು ಸಚಿವರು ತಿಳಿಸಿದರು.
ಅಂಜನಾದ್ರಿಗೆ ದೇಶದ್ಯಾಂತ ಪ್ರವಾಸಿಗರ ದಂಡು ಬರುತ್ತಿದೆ. ಇದರ ಸಂಪೂರ್ಣ ಅಭಿವೃದ್ದಿ ಆಗಬೇಕಿದೆ. ಹನುಮ ಹುಟ್ಟಿದ್ದು ಇಲ್ಲೆ ಎನ್ನುವುದಕ್ಕೆ ಅನೇಕ ದಾಖಲೆಗಳಿವೆ. ಎಲ್ಲ ಪುರಾವೆಗಳು, ಕುರುಹುಗಳಿವೆ. ಟಿಟಿಡಿ ಅವರ ವಾದ ಇರಬಹುದು. ಆದರೆ ಅಂಜನಾದ್ರಿನೇ ಹನುಮ ಹುಟ್ಟಿದ ಮೂಲ ಸ್ಥಳ. ಅಂಜನಾದ್ರಿ ಅಭಿವೃದ್ಧಿಗೆ ಸರ್ಕಾರ ಯೋಚನೆ ಮಾಡುತ್ತಿದೆ. ಇದಕ್ಕೆ ಸಣ್ಣ ಪುಟ್ಟ ಹಣ ಸಾಲಲ್ಲ. ಪ್ರವಾಸೋದ್ಯಮ, ಧಾರ್ಮಿಕ ದೃಷ್ಟಿಯಿಂದ ಇದು ಮಹತ್ವದ ಕ್ಷೇತ್ರ ಎಂದು ಯೋಗೇಶ್ವರ್ ಅಭಿಪ್ರಾಯಪಟ್ಟರು.

error: Content is protected !!