ಬೆಳಗಾವಿ: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಬಿಮ್ಸ್ ಆಡಳಿತ ಹಾಗೂ ಮೂಲಸೌಕರ್ಯ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆಗೊಂಡಿದೆ ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ್ ಬೆನಕೆ ಅಭಿಪ್ರಾಯಪಟ್ಟರು.
ನಗರದ ಬಿಮ್ಸ್ ಆವರಣದಲ್ಲಿ ಇಂದು ನಡೆದ ಬಿ.ಡಿ.ಎಸ್.ಎಸ್. ಸೊಸೈಟಿ ವತಿಯಿಂದ ಬಿಮ್ಸ್ ಗೆ 25 ಆಕ್ಸಿಜನ್ ಕಾನ್ಸಂಟ್ರೇಟರ್ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಮ್ಸ್ ಮೇಲಸ್ತುವಾರಿ ಅಧಿಕಾರಿಯಾಗಿ ಆಮ್ಲಾನ್ ಬಿಸ್ವಾಸ್ ಅವರ ನೇಮಕದಿಂದ ಬಿಮ್ಸ್ ಆಡಳಿತ ವ್ಯವಸ್ಥೆ ಉತ್ತಮವಾಗಿದೆ ಎಂದರು.
ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅನುಕೂಲವಾಗುವಂತೆ
ಬಿ.ಡಿ.ಎಸ್.ಎಸ್ ಸೊಸೈಟಿ ವತಿಯಿಂದ 25 ಆಕ್ಸಿಜನ್ ಕಾನ್ಸಂಟ್ರೇಟರ್ ಗಳು, ಮಾಸ್ಕ್, ಸ್ಯಾನಿಟೈಸರ್ ಗಳನ್ನು ಬಿಮ್ಸ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಯಿತು.
ಕೋವಿಡ್ 2 ನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿತ್ತು. ಆದರೆ ವಿವಿಧ ಸಂಸ್ಥೆಗಳು ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ವಿತರಣೆ ಮಾಡುವ ಮೂಲಕ ಸೋಂಕಿತರ ಚಿಕಿತ್ಸೆಗೆ ನೆರವಾಗಿವೆ. ಅದೇ ರೀತಿಯಲ್ಲಿ ಕ್ಯಾರಿಟಾಸ್ ಜರ್ಮನ್ ಕಂಪನಿಯ ಕಾನ್ಸಂಟ್ರೇಟರ್ ಗಳನ್ನು ವಿತರಣೆ ಮಾಡಿದ ಬೆಳಗಾವಿ ಡಿಯೋಸಿಸನ್ ಸೋಶಿಯಲ್ ಸರ್ವಿಸ್ ಸೊಸೈಟಿಯ ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು.
ಕೋವಿಡ್ ಪ್ರಾರಂಭದಿಂದ ಕೋವಿಡ್ ಸಮಯದಲ್ಲಿ ವಾರಿಯರ್ಸ್ ಗಳಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪಾತ್ರ ಬಹಳ ದೊಡ್ಡದು.
3 ನೇ ಅಲೆಯಲ್ಲಿ ಮಕ್ಕಳ ಕುರಿತು ಪಾಲಕರು ಎಚ್ಚರಿಕೆ ವಹಿಸಬೇಕು. ಬರುವ ದಿನಗಳಲ್ಲಿ ಕೋವಿಡ್ ಚಿಕಿತ್ಸೆಗೆ ಯಾವುದೇ ಕೊರತೆ ಆಗದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಅನಿಲ ಬೆನಕೆ ತಿಳಿಸಿದರು.
ಈ ಸಂದರ್ಭದಲ್ಲಿ 25 ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ಚಿಕಿತ್ಸೆ ಸಂಬಂಧಿಸಿದ ವಸ್ತುಗಳನ್ನು ನೀಡಿದ್ದಕ್ಕೆ ಬೆಳಗಾವಿಯ ಡಿಯೋಸಿಸನ್ ಸೋಶಿಯಲ್ ಸರ್ವಿಸ್ ಸೊಸೈಟಿಗೆ ಪ್ರಾದೇಶಿಕ ಆಯುಕ್ತರು ಹಾಗೂ ಬಿಮ್ಸ್ ಮೇಲಸ್ತುವಾರಿ ಅಧಿಕಾರಿಗಳಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಷಪ್ ಡರೆಕ್, ಕೋವಿಡ್ ಸಂದರ್ಭದಲ್ಲಿ ವೈದ್ಯರು, ನರ್ಸ್ ಸೇರಿದಂತೆ ವಿವಿಧ ವಿಭಾಗಗಳ ಆರೋಗ್ಯ ಸಿಬ್ಬಂದಿಯ ನಿರಂತರ ಸೇವೆಯನ್ನು ಕೊಂಡಾಡಿದರು.
ಸಂಸದರಾದ ಮಂಗಳಾ ಸುರೇಶ್ ಅಂಗಡಿ, ಬಿಮ್ಸ್ ನಿರ್ದೇಶಕರಾದ ಡಾ.ಉಮೇಶ ಕುಲಕರ್ಣಿ, ಬಿಮ್ಸ್ ಮುಖ್ಯ ಆಡಳಿತಾಧಿಕಾರಿ ಸಯೀದಾ ಆಫ್ರೀನಾ ಬಾನು ಬಳ್ಳಾರಿ, ಬೆಳಗಾವಿ ಡಿಯೋಸಿಸನ್ ಸೋಶಿಯಲ್ ಸರ್ವಿಸ್ ಸೊಸೈಟಿಯ(ಬಿಡಿಎಸ್ಎಸ್ಎಸ್) ನಿರ್ದೇಶಕ ಬಿಷಪ್ ಯುಸಿಬಿಯೋ ಫರ್ನಾಂಡಿಸ್ ಹಾಗೂ ಬಿಮ್ಸ್ ಅಧಿಕಾರಿಗಳು ಉಪಸ್ಥಿತರಿದ್ದರು.