ಬಾಗಲಕೋಟೆ: ಜಿಲ್ಲೆಯಲ್ಲಿ ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳಿಂದ ಉಂಟಾಗಬಹುದಾದ ಪ್ರವಾಹ ನಿಯಂತ್ರಣಕ್ಕೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತಿಯ ನೂತನ ಸಭಾಭವನದಲ್ಲಿಂದು ಪ್ರವಾಹ ಮುಂಜಾಗ್ರತಾ ಕ್ರಮ ಹಾಗೂ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಪ್ರವಾಹದಿಂದ 188 ಗ್ರಾಮಗಳು ಭಾದಿತಗೊಳ್ಳುತ್ತಿದ್ದು, ಅವುಗಳ ಮೇಲೆ ನಿಗಾವಹಿಸಬೇಕು. ಪ್ರವಾಹ ಉಂಟಾದಲ್ಲಿ ಜನರ ಸ್ಥಳಾಂತರಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಬೇಕು. ಮುಂಜಾಗ್ರತವಾಗಿ ಗುರುತಿಸಿದ 259 ಕಾಳಜಿ ಕೇಂದ್ರಗಳ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ತಿಳಿಸಿದರು.
ಜಿಲ್ಲೆಯಲ್ಲಿ ರೈತರಿಗೆ ಹಾಗೂ ಗ್ರಾಹಕರಿಗೆ ತೊಂದರೆಯಾಗದಂತೆ ಹುಬ್ಬಳ್ಳಿ ವಿದ್ಯತ್ ಸರಬರಾಜು ಕಂಪನಿಯ ಜಿಲ್ಲಾ ಅಧೀಕ್ಷಕ ಅಭಿಯಂತರ ಕಾಶಿನಾಥ ಹಿರೇಮಠ ಅವರಿಗೆ ಕ್ರಮಕೈಗೊಳ್ಳುವಂತೆ ಸೂಚಿಸಿದರು. ನಗರ ಪ್ರದೇಶದಲ್ಲಿ 24 ಗಂಟೆಯಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಮೂರುದಿನಗಳೊಳಗಾಗಿ ಟ್ರಾನ್ಸ್ಪರ್ಮರ್ ಸೇರಿದಂತೆ ವಿದ್ಯತ್ ಪ್ರಸರಣಕ್ಕೆ ಸಂಭಂದಿಸಿದಂತ ಎಲ್ಲ ಸಮಸ್ಯೆಗಳನ್ನು ಸರಿಪಡಿಸುವಂತೆ ಸಚಿವರು ಸೂಚಿಸಿದರು. ರೈತರಿಗೆ ಬೀಜ ಗೊಬ್ಬರಗಳ ಕೊರೆತಯಾಗದಂತೆ ಕ್ರಮವಹಿಸಲು ತಿಳಿಸಿದರು.
ಜಿಲ್ಲಾಧಿಕಾರಿ ಕಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಪ್ರವಾಹ ನಿಯಂತ್ರಕ್ಕೆ ಜಿಲ್ಲಾಡಳಿತ ಸನ್ನದ್ದವಾಗಿದ್ದು, ಅದಕ್ಕಾಗಿ ಜಿಲ್ಲೆಯಲ್ಲಿ ಎಲ್ಲ ತಾಲೂಕುಗಳ ಒಳಗೊಂಡಂತೆ ಒಟ್ಟು 466 ಸ್ವಯಂ ಸೇವಕರನ್ನು, 66 ಎನ್‍ಜಿಒ ಗಳನ್ನು, 476 ಹಾವು ಹಾವು ಹಿಡಿಯುವವರು ಸೇರಿ ಒಟ್ಟು 1036 ಜನರನ್ನು ಸಿದ್ದಗೊಳಿಸಲಾಗಿದೆ. ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಕುಡಿಯುವ ನೀರು, ಕೋವಿಡ್ ಸೇರಿದಂತೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 66.99 ಕೋಟಿ ರೂ. ಇರುವುದಾಗಿ ತಿಳಿಸಿದರು.
ಜಾನುವಾರುಗಳಿಗೆ 679126 ಟನ್ ಮೇವಿನ ಸಂಗ್ರಹವಿದೆ. ದಿನದ 24 ಗಂಟೆಗಳ ತುರ್ತು ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ. ಸೆಕ್ರ್ಯೂ ಉಪಕರಣಗಳನ್ನು ಬೇಡಿಕೆಯಂತೆ ಖರೀದಿಗೆ ಕ್ರಮಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಾದ ಅಕಾಲಿಕ ಮಳೆಯಿಂದ ಸಿಡಿಲಿನಿಂದ 3 ಜನ ಮೃತಪಟ್ಟಿರುತ್ತಾರೆ. ಈ ಪೈಕಿ ಇಬ್ಬರು ವ್ಯಕ್ತಿಗಳಿಗೆ ತಲಾ 5 ಲಕ್ಷಗಳಂತೆ ಪರಿಹಾರಧನ ನೀಡಲಾಗಿದೆ. ಅಲ್ಲದೇ 29 ಜಾನುವಾರುಗಳು ಸಿಡಿಲಿಗೆ ಬಲಿಯಾಗಿವೆ. ಈ ಪೈಕಿ 1.77 ಲಕ್ಷ ರೂ.ಗಳ ಪರಿಹಾರಧನ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಮಾತನಾಡಿ ಜಿಲ್ಲೆಯಲ್ಲಿ ಮೊದಲನೇ ಅಲೆಯಲ್ಲಿ 1161 ಜನಕ್ಕೆ ಕೋವಿಡ್ ಸೋಂಕು ದೃಡಪಟ್ಟರೆ, ಎರಡನೇ ಅಲೆಯಲ್ಲಿ 2381 ಜನಕ್ಕೆ ದೃಡಪಟ್ಟಿರುತ್ತದೆ. ಜಿಲ್ಲೆಯಲ್ಲಿ ಸದ್ಯ 466 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 317 ಕೊವಿಡ್ ಕೇರ್ ಸೆಂಟರನಲ್ಲಿದ್ದರೆ ಉಳಿದವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊದಲನೇ ಅಲೆಯಲ್ಲಿ 136 ಜನ ಮೃತಪಟ್ಟರೆ, 2ನೇ ಅಲೆಯಲ್ಲಿ 178 ಜನ ಮೃತಪಟ್ಟಿರುತ್ತಾರೆ. ಜಿಲ್ಲೆಯಲ್ಲಿ ಈಗಾಗಲೇ 531997 ಡೋಸ್ ಕೋವಿಡ್ ಲಸಿಕೆ ಹಾಕಲಾಗಿದೆ. ಅದರಲ್ಲಿ ಕೋವಾಕ್ಸಿನ್ 113529, ಕೋವಿಡಶಿಲ್ಡ 418468 ಡೋಸ್ ನೀಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕ ವೀರಣ್ಣ ಚರಂತಿಮಠ, ರಾಜ್ಯ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಟಿ.ಭೂಬಾಲನ್, ಉಪ ಕಾರ್ಯದರ್ಶಿ ಅಮರೇಶ ನಾಯಕ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಲ್ಲೊಳ್ಳಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.