ವಿಜಯಪುರ: ಸಿಎಂ ವಿರುದ್ಧ ಒಂದಿಲ್ಲೊಂದು ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿ ಇರುವ ಬಸವನಗೌಡ ಪಾಟೀಲ ಯತ್ನಾಳ ಅವರು ಈಗ ಸಿಎಂ ಯಡಿಯೂರಪ್ಪ ಅವರಿಗೆ ಪರೋಕ್ಷ ಟಾಂಗ್ ಒಂದನ್ನು ಕೊಟ್ಟಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಭೇಟಿ ಬಳಿಕವೂ ಸಿಎಂಗೆ ಟಾಂಗ್ ನೀಡಿರುವ ಯತ್ನಾಳ ಗೋ ಶಾಲೆ ನಿರ್ಮಾಣಕ್ಕೆ ಸಿದ್ದೇಶ್ವರ ಸಂಸ್ಥೆಗೆ 500 ಎಕರೆ ಭೂಮಿ ಮಂಜೂರು ಮಾಡಬೇಕೆಂದು ಪತ್ರ ಬರೆದಿದ್ದಾರೆ.
ಜಿಂದಾಲ್ ಕಂಪನಿಗೆ ನೀಡಿದಂತೆ ಸಿದ್ದೇಶ್ವರ ಸಂಸ್ಥೆಗೆ ಗೋ ಶಾಲೆ ನಿರ್ಮಾಣ ಮಾಡಲು ಜಮೀನು ಮಂಜೂರು ಮಾಡಲು ಮನವಿ ಮಾಡಿರುವ ಅವರು, ಜಿಂದಾಲ್ ಕಂಪನಿಗೆ ಪ್ರತಿ ಎಕರೆ 1.50 ಲಕ್ಷ ರೂಪಾಯಿ ನಿಗದಿ ಮಾಡಿದಂತೆ ನಮಗೂ ಮಾಡಿ ಜಿಂದಾಲ್ ಗೆ ವಿಧಿಸಿದ ಕರಾರುಗಳಂತೆ ನಮಗೂ 500 ಎಕರೆ ಜಮೀನು ಮಂಜೂರು ಮಾಡಿ ಎಂದಿದ್ದಾರೆ. ಅಷ್ಟೇ ಅಲ್ಲದೇ ನಾವು ಸಿದ್ದೇಶ್ವರ ಸಂಸ್ಥೆಯಿಂದ ಪ್ರತಿ ಎಕರೆಗೆ 2 ಲಕ್ಚ ರೂಪಾಯಿ ಪಾವತಿಸುತ್ತೇವೆ. ದೇಶಿ ಗೋವುಗಳ ರಕ್ಷಣೆ ಸಂತತಿಯ ಅಭಿವೃದ್ಧಿಗೆ ಪಣ ತೊಟ್ಟಿದ್ದೇವೆ ರಾಜ್ಯದ ಯಾವುದೇ ಮೂಲೆಯಲ್ಲಾದರೂ 500 ಎಕರೆ ಜಮೀನು ನೀಡಿ ಎಂದಿದ್ದಾರೆ ಯತ್ನಾಳ.
ಇನ್ನು ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಆರ್ ಅಶೋಕ ಒಳಗೊಂಡ ಸಮಿತಿಗೆ ನಮ್ಮ ಮನವಿ ಕಳುಹಿಸಿ, ಅವರಿಂದ ಶೀಘ ಶಿಫಾರಸ್ಸು ತರಿಸಿ ಮಂಜೂರಿಸಬೇಕು , ಮಂಜೂರು ಮಾಡಿದ ಬಳಿಕ ಗೋಶಾಲೆ ಕಾಮಗಾರಿ ಕೆಲಸ ಪ್ರಾರಂಭಿಸಲು ಅನಕೂಲವಾಗುತ್ತದೆ ಎಂದು ಮನವಿ ಬರೆದು ಪತ್ರದ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದ್ದಾರೆ ಬಸನಗೌಡ ಪಾಟೀಲ್ ಯತ್ನಾಳ