ಕೂಗು ನಿಮ್ಮದು ಧ್ವನಿ ನಮ್ಮದು

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಹೆಚ್. ವಿಶ್ವನಾಥ್

ಬೆಂಗಳೂರು ; ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಆದರೆ, ಅಷ್ಟರಲ್ಲಾಗಲೆ ಕಾಂಗ್ರೆಸ್ ಪಾಳಯದಲ್ಲಿ ಮುಂದಿನ ಸಿಎಂ ಯಾರು? ಎಂಬ ಕುರಿತ ಚರ್ಚೆಗಳು ಗರಿಗೆದರಿವೆ. ಇಂದು ಈ ಬಗ್ಗೆ ಖಾರವಾಗಿಯೇ ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್, “ಕ್ಷೇತ್ರವೇ ಇಲ್ಲದ ಸಿದ್ದರಾಮಯ್ಯನವರನ್ನು ಸಿಎಂ ಮಾಡುವುದ ಕ್ಕಿಂತ ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಪರಮೇಶ್ವರ್ ಸೇರಿದಂತೆ ಅನೇಕ ನಾಯಕರಿದ್ದಾರೆ” ಎಂದು ಕಿವಿಮಾತು ಹೇಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಹೆಚ್. ವಿಶ್ವನಾಥ್, “ಸಿದ್ದರಾಮಯ್ಯ ಶಿಷ್ಯಂದಿರು ಎಲ್ಲವನ್ನೂ ಮಾತಾಡ್ತಾರೆ, ಶಿಷ್ಯಂದಿರು 150 ಸೀಟು ಬರತ್ತೆ ಅಂತಾರೆ. ಆದರೆ, ಸಿದ್ದರಾಮಯ್ಯ ಸಿಎಂ ಆದಾಗಲೇ ಯಾಕೆ ಈ ಸಂಖ್ಯೆ 70 ಕ್ಕೆ ಬಂದು ನಿಂತಿದ್ದು ಏಕೆ?” ಎಂದು ಅಪಹಾಸ್ಯ ಮಾಡಿದ್ದಾರೆ. ಅಲ್ಲದೆ, “ಸಿದ್ದರಾಮಯ್ಯ ಗೆ ಕ್ಷೇತ್ರವೇ ಇಲ್ಲ. ಒಬ್ಬ ಮಾಜಿ ಸಿಎಂ ಆದವರು ಕ್ಷೇತ್ರದ ಹುಡುಕಾಟದಲ್ಲಿದ್ದಾರೆ.

ಮಾಜಿ ಸಿಎಂ ಗೆ ಇಂಥ ಪರಿಸ್ಥಿತಿ ಬರಬಾರದು. ಜಮೀರ್ ನ ಮುಂದಿಟ್ಟುಕೊಂಡು ಹೋಗಬೇಡಿ ಸಿದ್ದರಾಮಯ್ಯ ನವರೇ, ನಿಮಗೆ ಒಳ್ಳೆದಾಗಲ್ಲ” ಎಂದಿದ್ದಾರೆ.”ಸಿಎಂ ಸ್ಥಾನ ಪತ್ರಾವಳಿ ಅಲ್ಲ, ಸಿಎಂ ಸ್ಥಾನ ಉಂಡು ಬಿಸಾಡೋದಲ್ಲ. ಅದನ್ನು ಸ್ವಚ್ಚವಾಗಿಟ್ಟು ಮುಂದೆ ಬರುವವರಿಗೆ ಅವಕಾಶ ಕೊಡಬೇಕು. ಸಿದ್ದರಾಮಯ್ಯ ಬೇರೆ ಪಕ್ಷದಿಂದ ಬಂದು ಕಾಂಗ್ರೆಸ್ನಲ್ಲಿ ಸಿಎಂ ಅವಕಾಶ ಕೊಟ್ಟಾಗಿದೆ. ಡಿ.ಕೆ. ಶಿವಕುಮಾರ್ ಅದೇ ಪಕ್ಷದಲ್ಲಿ ಇದ್ದವರು, ಅವರಿಗೆ ಸಿಎಂ ಆಗುವ ಅವಕಾಶ ಸಿಗಬೇಕು. ಒಂದ್ಸಲ ಸಿದ್ದರಾಮಯ್ಯ ಗೆ ಅವಕಾಶ ಸಿಕ್ಕಾಗಿದೆ. ಈಗ ಮಲ್ಲಿಕಾರ್ಜುನ ಖರ್ಗೆ ಇದಾರೆ, ಪರಮೇಶ್ವರ್ ಇದಾರೆ. ಅವರಿಗೆ ಸಿಎಂ ಸ್ಥಾನ ನೀಡಿ” ಎಂದು ಹೆಚ್. ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.

error: Content is protected !!