ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಿಟ್ಟಿನಲ್ಲಿ ಸಕ್ರಿಯವಾಗಿದ್ದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರು ದಿಢೀರನೆ ದೂರವಾಣಿ ಕದ್ದಾಲಿಕೆ ಆರೋಪ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಧ್ಯೆ, ದೂರವಾಣಿ ಕದ್ದಾಲಿಕೆ ಆರೋಪ ಪ್ರಕರಣವನ್ನು ವಾಪಸ್ ತೆಗೆದುಕೊಳ್ಳುವ ಬಗ್ಗೆಯೂ ಆಲೋಚನೆ ನಡೆಸಿದ್ದಾರೆ. ಆದರೆ ಪ್ರಕರಣ ರಾಜಕೀಯವಾಗಿ ಸೂಕ್ಷವಾಗಿರುವುದರಿಂದ ತನಿಖಾ ಸಂಸ್ಥೆಗಳು ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಂಡುಕೊಳ್ಳಲು ನಿರ್ಧರಿಸಿವೆ. ಈ ನಿಟ್ಟಿನಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಶಾಸಕ ಬೆಲ್ಲದ್ಗೆ ನೋಟಿಸ್ ನೀಡಲಾಗಿದೆ. ಪ್ರಕರಣ ಸಂಬಂಧ ಈ ಹಿಂದೆ ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಎಸಿಪಿ ಪೃಥ್ವಿ ಮಾಹಿತಿ ಪಡೆಯಲಿದ್ದಾರೆ. ಈ ಹಿಂದೆ ಯುವರಾಜ ಸ್ವಾಮಿ ಹೆಸರಿನ ವ್ಯಕ್ತಿ ತಮಗೆ ಕರೆ ಮಾಡಿದ್ದನೆಂದು ಶಾಸಕ ಅರವಿಂದ ಬೆಲ್ಲದ್ ಪೊಲೀಸರಿಗೆ ದೂರು ನೀಡಿ, ಮಾಹಿತಿ ನೀಡಿದ್ದರು. ತಮಗೆ ಕರೆ ಮಾಡಿದ್ದ ಮೊಬೈಲ್ ನಂಬರ್ ಅನ್ನು ಸಹ ತನಿಖಾಧಿಕಾರಿಗೆ ನೀಡಿದ್ದರು. ಬೆಲ್ಲದ್ ನೀಡಿದ್ದ ನಂಬರ್ ಆಧರಿಸಿ ಪರಪ್ಪನ ಅಗ್ರಹಾರ ಜೈಲಲ್ಲಿರುವ ಯುವರಾಜ ಸ್ವಾಮಿಯನ್ನು ಎಸಿಪಿ ಯತಿರಾಜ್ ಸುಮಾರು ಒಂದೂವರೆ ಗಂಟೆ ಕಾಲ ವಿಚಾರಣೆ ನಡೆಸಿದ್ದಾರೆ. ಯುವರಾಜ ಸ್ವಾಮಿ ಗಣ್ಯ ವ್ಯಕ್ತಿಗಳಿಗೆ ವಂಚಿಸಿರುವ ನಾನಾ ಪ್ರಕರಣಗಳಲ್ಲಿ ಜೈಲುಪಾಲಾಗಿದ್ದು, ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾನೆ. ಪ್ರಕರಣ ಸಂಬಂಧ ಇದೀಗ ಮತ್ತೊಮ್ಮೆ BJP ಶಾಸಕ ಅರವಿಂದ ಬೆಲ್ಲದ್ ಅವರನ್ನು ಇಂದು ವಿಚಾರಣೆ ನಡೆಸುವ ಸಾಧ್ಯತೆಯಿದೆ.