ಬೆಳಗಾವಿ: ಉತ್ತರ ಕರ್ನಾಟಕದ ರೈತರ ಹಬ್ಬವೆಂದೇ ಬಿಂಬಿತವಾಗಿರುವ ಕಾರ ಹುಣ್ಣಿಮೆ ಈ ಬಾರಿ ಕಾರ ಹುಣ್ಣಿಮೆಯ ಸಿದ್ದತೆ ನೀರಸವಾಗಿದೆ. ಕೊರೊನಾ ವೈರಸ್ ಆರ್ಭಟದಿಂದಾಗಿ ಜನರು ಒಂದೆಡೆ ಗುಂಪಾಗಿ ಸೇರೋದು ನಿಷಿದ್ಧ. ಜೊತೆಯಲ್ಲೇ ಲಾಕ್ಡೌನ್ನಿಂದಾಗಿ ರೈತರು ತೀವ್ರ ನಷ್ಟ ಅನುಭವಿಸಿದ್ದಾರೆ. ಹೀಗಾಗಿ, ಎತ್ತುಗಳ ಶೃಂಗಾರಕ್ಕೆ ಬೇಕಾದ ವಸ್ತುಗಳ ಖರೀದಿ ಪ್ರಕ್ರಿಯೆಯು ಸಹ ನೀರಸವಾಗಿದೆ.
ಮುಂಗಾರು ಆರಂಭದ ವೇಳೆಯಲ್ಲೇ ಈ ಬಾರಿ ಕಾರು ಹುಣ್ಣಿಮೆ ಬಂದಿದೆ. ಇದು ಖುಷಿಯ ವಿಚಾರವಾದ್ರೂ ಕೊರೊನಾ ಕಾರಣದಿಂದಾಗಿ ಹಬ್ಬದ ಆಚರಣೆ ಮೇಲೆ ಕರಿನೆರಳು ಬಿದ್ದಿದೆ. ರೈತರಲ್ಲಿ ಉತ್ಸಾಹ ತುಂಬುವ ಹಬ್ಬ ಇದಾಗಿದ್ದು, ಈ ಬಾರಿ ಕೇವಲ ಸಾಂಕೇತಿಕವಾಗಿ ಹಬ್ಬ ನಡೆಯಲಿದೆ ಎಂಬ ಮಾತುಗಳು ರೈತ ವಲಯದಿಂದ ಕೇಳಿಬರುತ್ತಿದೆ.
ಹಳ್ಳಿಗಳಲ್ಲಿ ಜನರೆಲ್ಲ ಕೂಡಿ ಎತ್ತುಗಳ ಮೈತೊಳೆದು ಚೆಂದನೆಯ ಬಣ್ಣ ಬಳಿದು, ಕೊಂಬುಗಳನ್ನು ಪಾಲೀಶ್ ಮಾಡಿ ” ವಾರ್ನೀಶ್” ಹಚ್ಚಿ, ಕೊಂಬೆಣಸಿಗೆ ಕೆಂಪು ರಿಬ್ಬನ್ ಕಟ್ಟಿ ಅವುಗಳ ಅಂದವನ್ನು ಸವಿಯುತ್ತ ಅವುಗಳ ಬೆನ್ನು ಸವರುತ್ತ ಸಾಮೀಪ್ಯ ಸುಖ ಅನುಭವಿಸುತ್ತಿದ್ದವು, ಕಾರಹುಣ್ಣಿಮೆಯ ದಿನ.
ಇನ್ನು ಅವುಗಳಿಗೆ ತಿನ್ನಲು ಗುಗ್ಗರಿ ಮಾಡಿ, ಪೌಷ್ಟಿಕಾಂಶ ತುಂಬಿದ ದ್ರವರೂಪದ ಆಹಾರವನ್ನು ( ಕೆಲವೊಬ್ಬರು ಕೋಳಿ ಮೊಟ್ಟೆಯನ್ನು ಅದರಲ್ಲಿ ಸೇರಿಸುತ್ತಿದ್ದರು) ಗೊಟ್ಟದ ಮೂಲಕ ಅವುಗಳ ಗಂಟಲಿಗೆ ಇಳಿಸುವುದು ನಮ್ಮ ರೈತರ ಕಲಾನೈಪುಣ್ಯವಾಗಿತ್ತ. ಆಗ ಸಣ್ಣ ಮಕ್ಕಳಾದ ನಾವು ಅದನ್ನೆಲ್ಲ ಬೆರಗುಗಣ್ಣಿಂದ ನೋಡುತ್ತಿದ್ದೆವು,
ಮಧ್ಯಾಹ್ನದಷ್ಟೊತ್ತಿಗೆ ಇದ್ದ ಒಂದೇ ಪ್ರಮುಖ ರಸ್ತೆಯಲ್ಲಿ ಓಲಿಗಾಡಿಗೆ ಹೂಡಿದ ಹರೆಯದ ಹೋರಿಗಳ ಓಡಾಟ. ಅದೊಂದು ಸುಂದರ ಸ್ಪರ್ಧೆ. ಯಾರ ಎತ್ತುಗಳು ಅತೀ ವೇಗದಿಂದ ಓಡುತ್ತಿದ್ದವೋ ಅವರ ಮುಖದ ಮೇಲೊಂದು ಹೆಮ್ಮೆಯ ನಗು. ತಲೆಗೆ ಸುತ್ತಿದ ರೇಶಿಮೆ ರುಮಾಲನ್ನು ಬಿಚ್ಚಿ ತನ್ನ ಎತ್ತುಗಳು ಬಂದಾಗ ಹಾರಾಡಿಸುವುದೊಂದು ಅದರ ಯಜಮಾನನಿಗೆ ದೊರೆತ ಸೌಭಾಗ್ಯವಾಗಿತ್ತು. ಹೊತ್ತು ಮುಳುಗುವಷ್ಟೊತ್ತಿಗೆ ಕೊನೆಯ ಭಾಗವಾಗಿ “ಕರಿ ಹರಿಯುವ” ಕ್ರಿಯೆ. ಕಂದು ಬಣ್ಣದ ಹಾಗೂ ಬಿಳಿ ಬಣ್ಣದ ಎರಡು ಹೋರಿಗಳನ್ನು ಹುರಿದುಂಬಿಸುತ್ತ ಒಂದು ಕೊನೆಯಿಂದ ಇನ್ನೊಂದು ಕೊನೆಗೆ ಓಡಿಸಿ ಆ ವರ್ಷದ ಬೆಳೆಗಳ ಅಂದಾಜು.
ಕಂದು ಮುಂದೆ ಬಂದರೆ ಮುಂಗಾರಿ ಬೆಳೆಯುತ್ತದೆಂದೂ, ಬಿಳಿಮುಂದಾದರೆ ಹಿಂಗಾರಿ ಎಂದೂ ಅಂದಾಜು ಕಟ್ಟುತ್ತ ಆ ಹೋರಿಗಳ ತಲೆಗೆ ಕಟ್ಟಿದ್ದ ಬೇವಿನ ಟೊಂಗೆಯ ಎಲೆಗಳನ್ನು ಕಿತ್ತಾಡಿ ತಂದುಕೊಂಡು ಮನೆಯಲ್ಲಿಯ ಧಾನ್ಯಗಳ ಚೀಲಕ್ಕೆ ಹಾಕುತ್ತಿದ್ದೆವು… ಅದರಿಂದ ದವಸ ಧಾನ್ಯಗಳು ಹುಲಸಾಗುತ್ತವೆ ಎಂಬ ನಂಬಿಕೆಯೊಂದಿಗೆ…ಆ ದಿನ ಕರಿಹುಣ್ಣಿಮೆಯ ಸಂಭ್ರಮ ಇತ್ತು..