ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆ, ಹೋರಾಟ ಅಸಮಾಧಾನದ ನಂತರ ಬಿಜೆಪಿ ಪಕ್ಷದ ಪದಾಧಿಕಾರಿಗಳ ಸಭೆ ನಡೆಸುತ್ತಿದೆ. ಶನಿವಾರ ಪಕ್ಷದ ಕಾರ್ಯಕಾರಿಣಿ ಸಭೆ ನಡೆಯಲಿದ್ದು ಇದಕ್ಕಾಗಿ ತೀವ್ರತರದ ಸಿದ್ಧತೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಮೂರು ಸಭೆ ನಡೆಯಲಿದ್ದು, ಹಲವು ಪ್ರಮುಖ ನಾಯಕರು ವರ್ಚ್ಯೂಯಲ್ ಆಗಿ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದರು ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಮತ್ತು ಸದಾನಂದಗೌಡ ಹಾಗೂ ಹಲವು ಶಾಸಕರು ಭಾಗವಹಿಸಲಿದ್ದಾರೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವರ್ಚ್ಯೂವಲ್ ಆಗಿ ಪಾಲ್ಗೋಳ್ಳಲಿದ್ದಾರೆ. ಜೂನ್ 18 ರಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಇದರ ಬಗ್ಗೆ ನಿರ್ಧರಿಸಲಾಗಿತ್ತು.
ಬಿಜೆಪಿ ಕೋವಿಡ್ ಪರಿಸ್ಥಿತಿ ಮತ್ತು ವ್ಯಾಕ್ಸಿನೇಷನ್ ಡ್ರೈವ್ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ. ಕರ್ನಾಟಕದಾದ್ಯಂತ 60,000 ಬೂತ್ಗಳನ್ನು ಒಳಗೊಂಡ ಬೂತ್-ಮಟ್ಟದ ವ್ಯಾಕ್ಸಿನೇಷನ್ ಅಭಿಯಾನವನ್ನು ಕೈಗೊಳ್ಳಲು ಯೋಜಿಸಿದೆ. ಆದಷ್ಟು ಬೇಗ ಲಸಿಕೆ ಪಡೆಯುವಂತೆ ಪ್ರೋತ್ಸಾಹಿಸುತ್ತಿದ್ದು ಬೂತ್ಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಜಿಲ್ಲಾ ಪಂಚಾಯತ್ ಮತ್ತು ಬಿಬಿಎಂಪಿಗೆ ಚುನಾವಣೆಗಳು ಇನ್ನೂ ಕೆಲವು ತಿಂಗಳುಗಳು ಬಾಕಿ ಇರುವುದರಿಂದ, ಈಗ ಮತದಾನದ ಸಿದ್ಧತೆಗಳು ಚರ್ಚೆಯ ಪ್ರಾಥಮಿಕ ವಿಷಯವಾಗಿರುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಎಂಎಲ್ ಸಿ ರವಿ ಕುಮಾರ್, ಮಾಜಿ ಎಂಎಲ್ ಸಿ ಗಣೇಶ್ ಕಾರ್ಣಿಕ್ ಮತ್ತು ಸಂಸದ ಈರಣ್ಣ ಕಡಾಡಿ ಮಾತನಾಡಿ, ಜುಲೈ 6 ರವರೆಗೆ 58 ಸಾವಿರ ಬೂತ್ಗಳಲ್ಲಿ 11 ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ರಮ ಮತ್ತು ಪ್ರಧಾನಿ ಮೋದಿಯವರ ಮನ್ ಕಿ ಬಾತ್ ರೇಡಿಯೋ ಭಾಷಣವನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು. ಜೂನ್ 23 ಶ್ಯಾಮ ಪ್ರಕಾಶ್ ಮುಖರ್ಜಿಯವರ ಬಲಿದಾನ ದಿನವಾಗಿದ್ದು, ಅಂದು ರಾಜ್ಯದಲ್ಲಿ 300 ಕಡೆಗಳಲ್ಲಿ ಚಿಂತನ ಮಂಥನ ಕಾರ್ಯಕ್ರಮವನ್ನು ವೆಬೆಕ್ಸ್ ಮೂಲಕ ಹಮ್ಮಿಕೊಳ್ಳಲಾಗಿದೆ ಎಂದು ರವಿಕುಮಾರ್ ತಿಳಿಸಿದರು. 1975 ರಲ್ಲಿ ಕಾಂಗ್ರೆಸ್ ವಿಧಿಸಿದ ತುರ್ತು ಪರಿಸ್ಥಿತಿಯನ್ನು ನೆನಪಿಸಲು ಅವರು ಜೂನ್ 25 ರಂದು ‘ಕಪ್ಪು ದಿನ’ ಆಚರಿಸುವುದಾಗಿ ತಿಳಿಸಿದ್ದಾರೆ.