ಬೆಂಗಳೂರು: ಮಹಾಮಾರಿ ಕೊರೊನಾ ಮೂರನೇ ಅಲೆಯನ್ನು ತಡೆಗಟ್ಟಲು ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಕುರಿತಾಗಿ ಉನ್ನತ ಮಟ್ಟದ ತಜ್ಞರ ಸಮಿತಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಮತ್ತು ಇತರ ಸದಸ್ಯರು ಸಭೆ ನಡೆಸಿ, ರಾಜ್ಯ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ. ಇದರಂತೆ ಕರ್ನಾಟಕ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಲಾಗಿದ್ದು, ವಿಶೇಷವಾಗಿ ಮಕ್ಕಳನ್ನು ಮೂರನೇ ಅಲೆಯಿಂದ ರಕ್ಷಿಸಲು ಏನು ಮಾಡಬೇಕು? ಶಾಲೆಗಳನ್ನು ಆರಂಭಿಸುವುದಾದರೆ ಏನೆಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು? ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆಗಳನ್ನು ಪ್ರಾರಂಭ ಮಾಡುವುದಕ್ಕೆ ತಜ್ಞರಿಂದ ಸಲಹೆ ನೀಡಿದ್ದು, ಸಮ, ಬೆಸ ಮಾದರಿಯಲ್ಲಿ ತರಗತಿಗಳನ್ನು ಪ್ರಾರಂಭಿಸುವುದು ಉತ್ತಮ ಎಂಬ ಅಭಿಪ್ರಾಯ ಕೇಳಿಬಂದಿದೆ. ಮೊದಲ ಹಂತದಲ್ಲಿ ಕಾಲೇಜುಗಳನ್ನು ಆರಂಭಿಸುವುದು, ಎರಡನೇ ಹಂತದಲ್ಲಿ ೮ರಿಂದ ೧೦ನೇ ತರಗತಿಗೆ ಶಾಲೆ ಆರಂಭಿಸುವುದು ಹಾಗೂ ಮೂರನೇ ಹಂತದಲ್ಲಿ ೫ರಿಂದ ೭ನೇ ತರಗತಿಗಳನ್ನು ಪ್ರಾರಂಭಿಸುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಶಾಲಾ ಕಾಲೇಜಿನಲ್ಲಿ ಕೋವಿಡ್ ನಿಯಮಾವಳಿಗಳು ಕಡ್ಡಾಯವಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ರಾಜ್ಯ ಸರ್ಕಾರವೇ ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡಬೇಕು. ಶಾಲೆಗಳಲ್ಲಿ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಶಿಕ್ಷಕರು, ಶಾಲೆಯ ಉಳಿದ ಸಿಬ್ಬಂದಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿರಬೇಕು. ಇನ್ನು ಆರೋಗ್ಯವಂತ ಮಕ್ಕಳು ಮಾತ್ರ ಶಾಲೆಗೆ ಬರಬೇಕು. ಶಾಲಾ ಆವರಣಕ್ಕೆ ಬೇರೆಯವರಿಗೆ ಪ್ರವೇಶ ನಿರ್ಬಂಧ ಮಾಡಬೇಕು. ವಾರದಲ್ಲಿ ಒಂದು ಬಾರಿ ಸ್ಥಳೀಯ ವೈದ್ಯರಿಂದ ವೈದ್ಯಕೀಯ ತಪಾಸಣೆ ಮಾಡಿಸಬೇಕು. ಮಕ್ಕಳಿಗೆ ರಾಜ್ಯ ಸರ್ಕಾರವೇ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಶಾಲಾ ಆವರಣದ ಸುತ್ತಮುತ್ತ ತಿಂಡಿ ತಿನಿಸು ಮಾರಾಟ ಮಾಡುವುದನ್ನು ನಿಷೇಧಿಸಬೇಕು. ಕೊರೊನಾ ಮಹಾಮಾರಿಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಟ ಆಡಿಸಬೇಕು. ಮಕ್ಕಳಿಗೆ ಸರ್ಕಾರದಿಂದ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕು. ಊಟವನ್ನು ಸ್ಥಳೀಯ ಮಟ್ಟದಲ್ಲಿ ನೀಡುವುದು ಸೂಕ್ತ ಎಂಬ ಸಲಹೆಯನ್ನು ತಜ್ಞರು ವರದಿಯಲ್ಲಿ ತಿಳಿಸಿದ್ದಾರೆ.
ಪೋಷಕರು ಸಮ್ಮತಿಸಿದರೆ ಮಾತ್ರ ಮಕ್ಕಳನ್ನ ಶಾಲೆಗೆ ಕರೆತರಬೇಕು. ಮಕ್ಕಳ ಹಾಜರಾತಿ ಕಡ್ಡಾಯ ಮಾಡುವಂತಿಲ್ಲ. ಆನ್ಲೈನ್, ಆಫ್ಲೈನ್ ೨ ಮಾದರಿಯ ಕಲಿಕೆಗೂ ಅವಕಾಶ ನೀಡಬೇಕು ಎನ್ನುವುದನ್ನೂ ತಜ್ಞರು ಪ್ರತಿಪಾದಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ವರದಿ ಸಲ್ಲಿಕೆ ಮಾಡಲಾಗಿದ್ದು, ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಿಕೊಂಡು ಶಾಲಾ,ಕಾಲೇಜು ಆರಂಭಿಸುವುದು ಹೇಗೆ ಎಂಬ ಬಗ್ಗೆ ತಿಳಿಸಲಾಗಿದೆ.
ಶಾಲೆ ಪ್ರಾರಂಭಿಸಲು ಸಲಹೆ ನೀಡಿರುವ ಸಮೀಯ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಸಮಿತಿಯು ಶಿಕ್ಷಕರಿಗೆ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ನೀಡಿರಬೇಕು ಎಂದು ಹೇಳುವುದರ ಜತೆಗೆ, ಮಕ್ಕಳ ಪೋಷಕರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು ಹಾಗೂ ಮಕ್ಕಳ ಸಂಪರ್ಕಕ್ಕೆ ಬರುವ ಶಾಲಾ ಸಿಬ್ಬಂದಿಗೂ ಲಸಿಕೆ ನೀಡಬೇಕು ಎನ್ನುವುದನ್ನೂ ಪ್ರಸ್ತಾಪಿಸಿದ್ದಾರೆ. ಇನ್ನು ಶಾಲೆಗಳನ್ನು ಪ್ರದೇಶವಾರು ಹಂತ ಹಂತವಾಗಿ ಆರಂಭಿಸಬೇಕು. ಶಾಲೆಗಳಲ್ಲಿ ಸಮಾಜಿಕ ಅಂತರಕ್ಕೆ ಮೊದಲ ಆದ್ಯತೆ ನೀಡುವುದರೊಂದಿಗೆ ವಿದ್ಯಾರ್ಥಿಗಳು ಒಬ್ಬರ ವಸ್ತು ಇನ್ನೊಬ್ಬರು ಮುಟ್ಟದಂತೆ ಕಾಳಜಿ ವಹಿಸಬೇಕು ಎನ್ನುವುದನ್ನೂ ತಿಳಿಸಿದ್ದಾರೆ.
ಒಂದು ದಿನದಲ್ಲಿ ೨ರಿಂದ ೩ ಗಂಟೆ ಮಾತ್ರ ತರಗತಿ ನಡೆಸಬೇಕು. ರಾಜ್ಯದಲ್ಲಿ ೧೮ ವರ್ಷದೊಳಗಿನ ೨.೩೮ ಕೋಟಿ ಮಕ್ಕಳಿದ್ದಾರೆ. ೧೨ರಿಂದ ೧೮ ವರ್ಷದ ಮಕ್ಕಳಿಗೆ ಅತೀ ಶೀಘ್ರವಾಗಿ ಲಸಿಕೆ ನೀಡುವುದಕ್ಕೆ ಅನುಮೋದನೆ ಕೊಡುವುದು ಒಳ್ಳೆಯದು. ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಮಕ್ಕಳಿಗೆ ಕೊರೊನಾ ೩ನೇ ಅಲೆಯಲ್ಲಿ ಹೆಚ್ಚು ಅಪಾಯ ಆಗಬಹುದು, ೩.೪೦ ಲಕ್ಷ ಮಕ್ಕಳಿಗೆ ಸೋಂಕು ಹರಡುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ನೀಡಲಾಗಿದೆ.