ನವದೆಹಲಿ: ಇಂದು ಇಡೀ ಜಗತ್ತು ಕೋವಿಡ್-19 ಮಹಾಮಾರಿ ಸಾಂಕ್ರಾಮಿಕ ವಿರುದ್ಧ ಹೋರಾಡುತ್ತಿರುವಾಗ ಯೋಗ ನಮ್ಮ ಜೀವನದಲ್ಲಿ ಭರವಸೆಯ ಆಶಾಕಿರಣವಾಗಿದೆ. ಕಳೆದ ಎರಡು ವರ್ಷಗಳಿಂದ ಈಗ ಭಾರತದಲ್ಲಿ ಅಥವಾ ಬೇರೆ ರಾಷ್ಟ್ರಗಳಲ್ಲಿ ಕೊರೋನಾದಿಂದಾಗಿ ಯಾವುದೇ ಸಾರ್ವಜನಿಕ ಸಭೆ, ಸಮಾರಂಭ-ಕಾರ್ಯಕ್ರಮಗಳು ನಡೆದಿಲ್ಲ. ಆದರೆ ಜನರಲ್ಲಿ ಯೋಗದ ಬಗ್ಗೆ ಇರುವ ಉತ್ಸಾಹ ಕಡಿಮೆಯಾಗಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಇಂದು 7ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಉದ್ದೇಶಿಸಿ ಮಾತನಾಡಿ, ಈ ವರ್ಷದ ಯೋಗ ದಿನದ ಧ್ಯೇಯವಾಕ್ಯ ‘ಸ್ವಾಸ್ಥ್ಯಕ್ಕಾಗಿ ಯೋಗ’ ಎಂಬುದಾಗಿದೆ. ಇತ್ತೀಚಿನ ಪರಿಸ್ಥಿತಿ, ಆರೋಗ್ಯದ ಸ್ಥಿತಿಗತಿಯಿಂದಾಗಿ ಹೆಚ್ಚೆಚ್ಚು ಮಂದಿ ಯೋಗ ಮಾಡುವಂತೆ ಜನರನ್ನು ಪ್ರೇರೇಪಿಸುತ್ತದೆ. ಪ್ರತಿ ದೇಶಗಳು, ಪ್ರತಿ ಪ್ರದೇಶಗಳು, ಜನರು ಆರೋಗ್ಯಯುತವಾಗಿ ಬಾಳಲಿ ಎಂದು ನಾನು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಕೇಳಿಕೊಳ್ಳುತ್ತೇನೆ ಎಂದರು. ಇಂದು ವೈದ್ಯಕೀಯ ವಿಜ್ಞಾನವು ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಗುಣಪಡಿಸುವ ಪ್ರಕ್ರಿಯೆಗೆ ಒತ್ತು ನೀಡುತ್ತದೆ. ಗುಣಪಡಿಸುವ ಪ್ರಕ್ರಿಯೆಯಲ್ಲಿ ಯೋಗ ಸಹಾಯ ಮಾಡುತ್ತದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಯೋಗವನ್ನು ರಕ್ಷಾಕವಚವಾಗಿ ಬಳಸಿದ್ದಾರೆ. ಕೊರೋನಾ ಚಿಕಿತ್ಸೆಯ ಮಧ್ಯೆ ಇಂದು ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಯರು ಯೋಗವನ್ನು ಕಲಿಸುತ್ತಾ ಅನುಲೋಮ-ವಿಲೋಮ, ಪ್ರಾಣಾಯಾಮದಂತಹ ಉಸಿರಾಟದ ವ್ಯಾಯಾಮ ಮಾಡಿಸುತ್ತಿದ್ದಾರೆ. ಈ ವ್ಯಾಯಾಮಗಳು ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸುತ್ತವೆ ಎಂದು ಅಂತರರಾಷ್ಟ್ರೀಯ ತಜ್ಞರು ಹೇಳಿದ್ದಾರೆ ಎಂದು ಪ್ರಧಾನಿ ಇಂದು ಹೇಳಿದರು.