ಬೆಳಗಾವಿ: ಚಿಕ್ಕೋಡಿಯಲ್ಲಿ ತಂದೆಯೋರ್ವ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಒಂದು ವಾರದ ಹಿಂದೆಯಷ್ಟೇ ಮೃತನ ಹೆಂಡತಿ ಚೆನ್ನವ್ವ ರಂಗಾಪುರೆ ಹೃದಾಯಾಘಾತದಿಂದ ಸಾವನ್ನಪ್ಪಿದ್ದರು. ಚೆನ್ನವ್ವಳ ಅಗಲಿಕೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಗಂಡ ಮತ್ತು ಇಬ್ಬರು ಹೆಣ್ಣು ಮಕ್ಕಳು ಅದೇ ನೋವಿನಲ್ಲಿ ದಿನ ಕಳೆದಿದ್ರು.
ಆದರೆ ದುರಾದೃಷ್ಟವಶಾತ್ಃ ಇಂದು ಮನನೊಂದ ಪತಿ ಕಾಡಪ್ಪ ಹಾಗೂ ಇಬ್ಬರು ಹೆಣ್ಣುಮಕ್ಕಳು ಇದೀಗ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಂಡತಿಯ ಸಾವಿನಿಂದ ಮನನೊಂದಿದ್ದ ಪತಿ ತನ್ನ ಇಬ್ಬರು ಹೆಣ್ಣುಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದು, ಗ್ರಾಮಸ್ಥರನ್ನು ಮಮ್ಮಲ ಮರುಗುವಂತೆ ಮಾಡಿದೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಪೊಗತ್ಯಾನಟ್ಟಿ ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದ್ದು, ಮೃತರನ್ನು ಕಾಡಪ್ಪ (47) ಹಾಗೂ ಮಕ್ಕಳಾದ ಕೀರ್ತಿ (20), ಸ್ಫೂರ್ತಿ (18) ಎಂದು ಗುರುತಿಸಲಾಗಿದೆ. ವಿಷಯ ತಿಳಿದ ಚಿಕ್ಕೋಡಿ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನೆ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.