ಕೂಗು ನಿಮ್ಮದು ಧ್ವನಿ ನಮ್ಮದು

ಮಹಾರಾಷ್ಟ್ರದಲ್ಲಿ ಭಾರಿ ಮಳೆ ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಭೀತಿ: ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧ

ಚಿಕ್ಕೋಡಿ: ಮಹಾರಾಷ್ಟ್ರ ಹಾಗೂ ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಮುಂದುವರೆದ ಮಳೆಯ ಅಬ್ಬರದಿಂದ ಕೃಷ್ಣಾ ನದಿ ನೀರಿನ ಒಳಹರಿವು ಹೆಚ್ಚಳ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕೃಷ್ಣಾ, ದೂದಗಂಗಾ, ವೇದಗಂಗಾ, ಹೀರಣ್ಯಕೇಶಿ ನದಿಗಳ ನೀರಿನ ಮಟ್ಟದಲ್ಲಿ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ. ಹೀಗಾಗಿ ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ತಾಲೂಕುಗಳ 7 ಸೇತುವೆಗಳು ಈಗಾಗಲೇ ಜಲಾವೃತಗೊಂಡಿವೆ.

ಜತ್ರಾಟ- ಭೀವಶಿ, ಭೋಜ- ಕಾರದಗಾ, ಅಕ್ಕೋಳ – ಸಿದ್ನಾಳ, ನಾಗನೂರು – ಗೋಟೂರ, ಹುನ್ನರಗಿ-ಮಮದಾಪೂರ,ಭೋಜವಾಡಿ- ಕುನ್ನೂರ, ಯಡೂರು- ಕಲ್ಲೋಳ ಸೇತುವೆಗಳು‌ ಮುಳುಗಡೆಯಾಗಿವೆ. ಇದರಿಂದ 14 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಗಳು ಬಂದ್ ಆಗಿದ್ದರಿಂದ ಪರ್ಯಾಯ ಮಾರ್ಗಗಳ‌ ಮೂಲಕ ಸಾರ್ವಜನಿಕರು ಸಂಚಾರ ಮಾಡುತ್ತಿದ್ದಾರೆ.

ಇನ್ನು ಪ್ರವಾಹ ಪರಿಸ್ಥಿತಿ ಎದುರಿಸಲು ಬೆಳಗಾವಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ರಾಯಭಾಗ, ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ಅಥಣಿ ತಾಲ್ಲೂಕಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಚಿಕ್ಕೋಡಿ ತಾಲ್ಲೂಕಿನ ಯಡೂರ ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎನ್.ಡಿ.ಆರ್.ಎಫ್ ತಂಡವನ್ನು ನಿಯೋಜನೆ ಮಾಡಲಾಗಿದೆ. ಅಗತ್ಯ ಬಿದ್ದರೆ ಸಂತ್ರಸ್ತರಿಗೆ ನೆರವು ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸಂತ್ರಸ್ತರಿಗೆ ಕಾಳಜಿ ಕೇಂದ್ರ ತೆರೆಯಲು ಮತ್ತು ಊಟ ವಸತಿ ಒದಗಿಸಲು ತಾಲೂಕು ಆಡಳಿತಗಳು ಸಿದ್ದತೆ ಮಾಡಿಕೊಂಡಿವೆ.

ಕಳೆದ ಬಾರಿ ಪ್ರವಾಹ ಸಂಧರ್ಭದಲ್ಲಿ ಸಾವಿರಾರು ಜನ ಮನೆ ಕಳೆದುಕೊಂಡು ಆಸರೆ ಪಡೆದಿದ್ದ ಕಾಳಜಿ ಕೇಂದ್ರಗಳಲ್ಲಿ ಯಾವುದೇ ಕೊರತೆ ಆಗದಂತೆ ಜಿಲ್ಲಾಧಿಕಾರಿ ಎಮ್‌.ಜಿ. ಹಿರೇಮಠ ಸೂಚನೆ ನೀಡಿದ್ದಾರೆ. ಈಗಾಗಲೇ ಹಲವು ಕಡೆ ಸುರಕ್ಷಿತ ಸ್ಥಳಾಂತರಕ್ಕೆ ಬೋಟ್ ಗಳು ಸನ್ನದ್ದ ಸ್ಥಿತಿಯಲ್ಲಿದ್ದು, ನದಿ ತೀರದ ಗ್ರಾಮಗಳಿಗೆ ಪಂಚಾಯತಿ ಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

error: Content is protected !!