ಕೂಗು ನಿಮ್ಮದು ಧ್ವನಿ ನಮ್ಮದು

ಧಾರಾಕಾರ ಮಳೆಗೆ ಬೆಳಗಾವಿಯಲ್ಲಿ ಮೊದಲ ಬಲಿ: ಮಾರ್ಕಾಂಡೆಯ ನದಿಯಲ್ಲಿ ಕೊಚ್ಚಿ ಹೋದ ರೈತ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದ್ದು ಮಹಾಮಳೆ ಮೊದಲ ಬಲಿ ಪಡೆದಿದೆ. ಬೆಳಗಾವಿಯಲ್ಲಿ ಸುರಿತ್ತಿರುವ ಧಾರಾಕಾರ ಮಳೆಗೆ ಮೊದಲ ಬಲಿಯಾಗಿದ್ದು, ಬೆಳಗಾವಿಯ ಮಾರ್ಕಂಡೆಯ ನದಿಯ ಪ್ರವಾಹದಲ್ಲಿ ರೈತನೊರ್ವ ಕೊಚ್ಚಿ ಹೋಗಿದ್ದಾನೆ. ಕಾಕತಿ ಗ್ರಾಮದ 65 ವರ್ಷ ವಯಸ್ಸಿನ ಸಿದ್ರಾಯಿ ದೊಡ್ಡರಾಮಾ ಸುತಗಟ್ಟಿ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋದ ರೈತನಾಗಿದ್ದು, ತಮ್ಮ ಕೃಷಿ ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ.

ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದಾಗ ನದಿಯ ಸೇತುವೆ ಬಳಿ ಕೈ ಕಾಲು ತೊಳೆದುಕೊಳ್ಳು ಹೋಗಿದ್ದಾರೆ. ಈ ಸಂದರ್ಭದಲ್ಲಿ ರೈತ ಸಿದ್ರಾಯಿ ಕಾಲು ಜಾರಿ ಬಿದ್ದು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ. ರೈತ ಕೊಚ್ಚಿ ಹೋಗಿದ್ದನ್ನ ಸ್ಥಳಿಯರು ಖಚಿತಪಡಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಸ್ಥಳಿಯರು ಜಮಾಯಿಸಿದ್ದು, ಸ್ಥಳಕ್ಕೆ ಬೆಳಗಾವಿ ಉಪ ವಿಭಾಗಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಸ್ಥಳಿಯ ಈಜುಗಾರರು ಅಗ್ನಿಶಾಮಕ ದಳದ ಸಹಾಯದಿಂದ ರೈತನ ಮೃತ ದೇಹಕ್ಕಾಗಿ ಶೋಧಕಾರ್ಯ ನಡೆಸಲಾಯಿತು. ಧಾರಾಕಾರ ಮಳೆ ಮತ್ತು ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದರಿಂದ ಕಾರ್ಯಾಚರಣೆ ಅರ್ಧದಲ್ಲಿಯೇ ಮೊಟಕುಗೊಳಿಸಿದ ಅಧಿಕಾರಿಗಳು, ನಾಳೆ ಬೆಳಿಗ್ಗೆ ಮತ್ತೆ ಶೋಧ ಕಾರ್ಯ ಮುಂದುವರಿಸಲಿದ್ದಾರೆ. ಸಧ್ಯ ಮೃತ ರೈತ ಸಿದ್ರಾಯಿ ಮನೆಯವರ ಆಕ್ರಂಧನ ಮುಗಿಲು ಮುಟ್ಟಿದ್ದು, ಮಹಾಮಳೆ ಮತ್ತೇನೇನು ಅನಾಹುತ ಮಾಡಲಿದೆಯೋ ಎನ್ನುವಂತಾಗಿದೆ.

error: Content is protected !!