ಮೈಸೂರು: ಐಎಎಸ್ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾನಾಗ್ ವರ್ಗಾವಣೆ ಬೆನ್ನಲೇ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಅಮರನಾಥ್ ಅವರನ್ನೂ ಎತ್ತಂಗಡಿ ಮಾಡಲಾಗಿದೆ.ಮೈಸೂರು ಜಿಲ್ಲೆಯಲ್ಲಿ ಕೋವಿಡ್ ವಿಕೋಪ ಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡಲಿಲ್ಲ ಎನ್ನುವ ಕಾರಣಕ್ಕೆ ಈತನಕ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಅಮರನಾಥ್ರನ್ನು ಸರಕಾರ ವರ್ಗಾವಣೆ ಮಾಡಿದೆ. ಇವರ ಜಾಗಕ್ಕೆ ಆರೋಗ್ಯ ಇಲಾಖೆ ವಿಭಾಗಿಯ ಉಪ ನಿರ್ದೇಶಕ ಡಾ.ಕೆ.ಎಚ್. ಪ್ರಸಾದ್ರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮೈಸೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ, ಸಾವು ಅಧಿಕಗೊಳ್ಳಲು ಸೂಕ್ತ ನಿರ್ವಹಣೆ ಕೊರತೆಯೇ ಕಾರಣ ಎನ್ನಲಾಗಿತ್ತು. ಅಲ್ಲದೆ ಪರಿಸ್ಥಿತಿ ನಿರ್ವಹಣೆ ವಿಚಾರವಾಗಿ ಆರೋಗ್ಯಾಧಿಕಾರಿ ಅಮರನಾಥ್ ಅವರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತರಾಗಿದ್ದ ಶಿಲ್ಪಾ ನಾಗ್ ಅವರಿಗೆ ಕಾಲಕಾಲಕ್ಕೆ ಮಾಹಿತಿ ಕೊಟ್ಟು ಸಮನ್ವಯ ಮಾಡುವುದರಲ್ಲೂ ಅಮರನಾಥ್ ವಿಫಲರಾಗಿದ್ದರು ಎನ್ನುವ ಮಾಹಿತಿ ಸರಕಾರಕ್ಕೆ ಹೋಗಿತ್ತು ಎನ್ನಲಾಗಿದೆ.