ಕೂಗು ನಿಮ್ಮದು ಧ್ವನಿ ನಮ್ಮದು

ಸಿಎಂ ಯಡಿಯೂರಪ್ಪ ಅವರನ್ನು ಮತ್ತೆ ಕುಟುಕಿದ ‘ಹಳ್ಳಿಹಕ್ಕಿ’ಎಚ್ ವಿಶ್ವನಾಥ್

ಬೆಂಗಳೂರು: ಬಿ ಎಸ್ ಯಡಿಯೂರಪ್ಪನವರು ಈ ಹಿಂದೆ ತಮ್ಮ ಮಕ್ಕಳ ಭ್ರಷ್ಟಾಚಾರದಿಂದಲೇ ಜೈಲಿಗೆ ಹೋಗಿ ಬಂದರು, ಈ ಸಲ ಕೂಡ ಅವರು ಮತ್ತೆ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬರಬಹುದೇನೋ ಎಂಬ ಆತಂಕ ನನಗೆ, ಅದಕ್ಕೆ ಪಕ್ಷದ ಮತ್ತು ರಾಜ್ಯದ ಜನತೆಯ ಒಳಿತಿನ ಹಿತದೃಷ್ಟಿಯಿಂದ ಸರ್ಕಾರದಲ್ಲಿ ಆಗುತ್ತಿರುವ ಅಕ್ರಮಗಳನ್ನು ವರಿಷ್ಠರ ನಾಯಕರ ಗಮನಕ್ಕೆ ತರಲು ಪ್ರಯತ್ನ ಮಾಡಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ಹಿರಿಯ ನಾಯಕ ಹೆಚ್ ವಿಶ್ವನಾಥ್ ಮತ್ತೊಮ್ಮೆ ಗುಡುಗಿದ್ದಾರೆ.ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೀರಾವರಿ ಇಲಾಖೆಯಲ್ಲಿ 20 ಸಾವಿರ ಕೋಟಿ ರೂಪಾಯಿ ಟೆಂಡರ್ ಕರೆದು ತರಾತುರಿಯಲ್ಲಿ ಅಂಗೀಕರಿಸಿದ್ದಾರೆ, ವಿವಿಧ ಇಲಾಖೆಗಳಲ್ಲಿ, ಸಚಿವರ ಕೆಲಸಗಳಲ್ಲಿ ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ, ಇದು ಕಿಕ್ ಬ್ಯಾಕ್ ಸರ್ಕಾರ, ಸಚಿವರ ಖಾತೆಗಳಲ್ಲಿ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿರುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ, ಕಾವೇರಿ ನೀರಾವರಿ ನಿಗಮದಲ್ಲಿ ಅಕ್ರಮ ನಡೆದಿದೆ, ಇದೇನು ಕಾಂಟ್ರಾಕ್ಟ್ ಓರಿಯೆಂಟ್ ಡ್ ಸರ್ಕಾರನಾ ಇದು ಎಂದು ವಿಶ್ವನಾಥ್ ಪ್ರಶ್ನಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸರ್ಕಾರದ ವಿರುದ್ಧ ಯಾರೂ ಮಾತನಾಡುತ್ತಿಲ್ಲ, ನೀವೊಬ್ಬರೇ ಹೀಗೆ ಪುಂಖಾನುಪುಂಖವಾಗಿ ಆರೋಪ ಮಾಡುತ್ತಿದ್ದೀರಿ, ಅಧಿಕಾರ ಸಿಗದೆ ಬೇಸರದಿಂದ ಹೀಗೆ ಮಾತನಾಡುತ್ತಿದ್ದೀರಿ ಎಂಬ ಮಾತುಗಳು ಕೇಳಿಬರುತ್ತಿದೆಯಲ್ಲವೇ ಎಂದು ಕೇಳಿದಾಗ ವಿಶ್ವನಾಥ್, ಈ ಸರ್ಕಾರ ಅಸ್ತಿತ್ವಕ್ಕೆ ಬರಲು ನಾನು ಕೂಡ ಕಾರಣ, ನನಗೆ ಅಧಿಕಾರ ಸಿಗಬೇಕೆಂಬ ಆಸೆಯಿಲ್ಲ, ಆದರೆ ಕೆಲವರ ಹಣ-ಅಧಿಕಾರ ದಾಹದಿಂದ ಪಕ್ಷ ಹಾಳಾಗಿ ಹೋಗಬಾರದು ಎಂಬುದು ನನ್ನ ಉದ್ದೇಶವಷ್ಟೆ, ಇನ್ನು ಸಿಎಂ ಮತ್ತು ಅವರ ಕುಟುಂಬದವರ ಬಗ್ಗೆ ಮಾತನಾಡಲು ಬಹುತೇಕ ಸಚಿವರು, ಶಾಸಕರಿಗೆ ಧೈರ್ಯವಿಲ್ಲವಷ್ಟೆ, ಇತ್ತೀಚೆಗೆ ಈಶ್ವರಪ್ಪ ಏಕೆ ರಾಜ್ಯಪಾಲರಿಗೆ ದೂರು ಕೊಟ್ಟರು ಎಂದು ಪ್ರಶ್ನಿಸಿದರು. ತಮ್ಮ ವಿರುದ್ಧ ಮಾತನಾಡಿದವರಿಗೆ ತಮ್ಮದೇ ಶೈಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೆಚ್ ವಿಶ್ವನಾಥ್ ತಿರುಗೇಟು ಕೊಟ್ಟರು. ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಕೂಡ ಬಿಡುಗಡೆ ಮಾಡಿದರು.ಬಿ ವೈ ವಿಜಯೇಂದ್ರ ವಿರುದ್ಧ ಇಡಿಯಲ್ಲಿ ಪ್ರಕರಣವಿದೆ, ಹಾಗಾಗಿ ಆಗಾಗ ದೆಹಲಿಗೆ ಹೋಗಿ ಬರುತ್ತಿದ್ದಾರೆ. ಬಿಜೆಪಿ ಯಾವುದೇ ಕುಟುಂಬದ ಪಾರ್ಟಿಯಲ್ಲ, ಸರ್ಕಾರ ಯಾರ ಆಸ್ತಿಯೂ ಅಲ್ಲ, ಇದು ಜನರದ್ದು ಎಂದರು.ಇನ್ನು ತಮ್ಮ ವಿರುದ್ಧ ನಿನ್ನೆ ಹರಿಹಾಯ್ದಿದ್ದ ಎಂ ಪಿ ರೇಣುಕಾಚಾರ್ಯ ಅವರಿಗೆ ನರ್ಸ್ ಜಯಲಕ್ಷ್ಮಿ ಪ್ರಕರಣದಲ್ಲಿ ಏನಾಯ್ತು, ವಿಶ್ವನಾಥ್ ಬಚ್ಚಾ, ಇವತ್ತು ನನ್ನಂಥವರ ತ್ಯಾಗದಿಂದಲೇ ಬಿಡಿಎ ಅಧ್ಯಕ್ಷನಾಗಿ ಕೋಟಿ ಕೋಟಿ ದೋಚುತ್ತಿದ್ದಾನೆ, ಇನ್ನು ಹಾಲಪ್ಪ ಸ್ನೇಹಿತನ ಮನೆಗೆ ಊಟಕ್ಕೆ ಹೋಗಿ ಆತನ ಪತ್ನಿಯ ಮೇಲೆಯೇ ಅತ್ಯಾಚಾರ ಮಾಡಿದವ, ಸಿದ್ದರಾಮಯ್ಯನವರೇ ನಾನು ನಿಮಗೆ ಅದೆಷ್ಟು ದ್ರಾಕ್ಷಿ ತಿನ್ನಿಸಿದ್ದೇನೆ ಎಂದು ಬಹಿರಂಗವಾಗಿಯೇ ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.

error: Content is protected !!