ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಚಿಕ್ಕೋಡಿಯ ಒಟ್ಟು 6 ಕೆಳ ಹಂತದ ಸಂಪರ್ಕ ಸೇತುವೆಗಳು ಸಂಪೂರ್ಣ ಜಲಾವೃತ್ತಗೊಂಡಿದೆ. ಕೃಷ್ಣಾ, ವೇದಗಂಗಾ, ದೂದಗಂಗಾ ಹಾಗೂ ಹಿರಣ್ಯಕೇಶಿ ನದಿ ನೀರಿನ ಮಟ್ಟ ಹೆಚ್ಚಾಗಿದ್ದು, ನಿಪ್ಪಾಣಿ ತಾಲೂಕಿನ ವೇದಗಂಗಾ ನದಿಯ ಜತ್ರಾಟ್- ಭೀವಶಿ, ಅಕ್ಕೋಳ-ಸಿದ್ನಾಳ, ಮಮದಾಪೂರ-ಹುಣ್ಣರಗಿ, ಭೋಜವಾಡಿ-ಕೊಣ್ಣೂರ ಹಾಗೂ ಕಾರದಗಾ-ಭೋಜ, ಗ್ರಾಮದ ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ಇನ್ನು ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿಯ ಹರಿವು ಹೆಚ್ಚಾಗಿದ್ದು, ಸಂಕೇಶ್ವರ-ನಾಗನೂರ ಗ್ರಾಮದ ಸಂಪರ್ಕ ಸೇತುವೆ, ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ ಸೇತುವೆ ಮುಳುಗಡೆಯಾಗಿದೆ. ಬಿಟ್ಟು ಬಿಡದೇ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಹತ್ತಾರು ಗ್ರಾಮಗಳ ಸಾರಿಗೆ ಸಂಪರ್ಕ ಕಡಿತಗೊಂಡಿದೆ.