ಬೆಳಗಾವಿ- ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಇಂದು ಬೆಳಗಾವಿಯ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸಭೆ ನಡೆಸಿದ್ದು. ಈ ಸಭೆಗೆ ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡಗೌಡ್ರ ಮಾತ್ರ ಹಾಜರ್ ಆಗಿದ್ದು ಉಳಿದೆಲ್ಲ ಶಾಸಕರು ಗೈರಾಗಿದ್ದಾರೆ. ಈಶ್ವರಪ್ಪನವರು ಬೆಳಗಾವಿಗೆ ಬರುವ ಕಾರ್ಯಕ್ರಮ ಎರಡು ದಿನ ಮೊದಲೇ ಫಿಕ್ಸ್ ಆಗಿತ್ತು, ಆದರೂ ಜಿಲ್ಲೆಯ ಶಾಸಕರು ಸಚಿವ ಈಶ್ವರಪ್ಪ ಅವರ ಸಭೆಗೆ ಗೈರು ಆಗಿದ್ದರು. ಆದರೆ ಸಚಿವ ಈಶ್ವರಪ್ಪ ಮಾತ್ರ ನರೇಗಾ ಯೋಜನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ನಿಗದಿತ ಗುರಿ ಸಾಧನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗುರಿ ಸಾಧನೆ ಆಗದಿರುವುದಕ್ಕೆ ಕಾರಣಗಳು ಪತ್ತೆ ಮಾಡಬೇಕು. ಸಮುದಾಯ ಕಾಮಗಾರಿ ಸಾಧ್ಯವಾಗದಿದ್ದರೆ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಂಡು ಗುರಿ ತಲುಪಬೇಕು ಎಂದು ತಿಳಿಸಿದರು. ಇನ್ನೂ ಕೆರೆಗಳನ್ನು ನಿರ್ವಹಣೆಗೆ ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಲಾಗಿದೆ. ಕೆರೆ ನಿರ್ಮಾಣ ಯೋಜನೆ ಪ್ರಧಾನಮಂತ್ರಿಗಳ ಕನಸಿನ ಯೋಜನೆಯಾಗಿದೆ. ಇದು ರೈತರಿಗೆ ಹಾಗೂ ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗಿರುವುದರಿಂದ ಪ್ರತಿ ಪಂಚಾಯಿತಿಗಳಲ್ಲೂ ಕಡ್ಡಾಯವಾಗಿ ಒಂದು ಕೆರೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಜಾಗೆಯನ್ನು ಒದಗಿಸಿರುವುದಕ್ಕೆ ಜಿಲ್ಲಾಧಿಕಾರಿ ಹಿರೇಮಠ ಅವರಿಗೆ ಸಚಿವರು ಕೃತಜ್ಞತೆ ಸಲ್ಲಿಸಿದರು