ಕೋಲಾರ: ಕೊರೊನಾ ಲಾಕ್ ಡೌನ್ ನಿಂದ ಶಾಲೆಗಳು ಬಂದ್ ಆಗಿದ್ದು ಶಾಲಾ ಆವರಣಗಳಲ್ಲಿ ಅಕ್ರಮ ಚಟುವಟಿಕೆಗಳು ಮಿತಿಮೀರಿವೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಾಸ್ತೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಕೆಲ ಗ್ರಾಮಸ್ಥರು ಒಂಟಿ ಜೋಡಿ ಆಡುವ ಮೂಲಕ ಸಾವಿರಾರು ರೂಪಾಯಿ ಬೆಟ್ಟಿಂಗ್ ಕಟ್ಟಿದ್ದಾರೆ. ಶಾಲಾ ಆವರಣದಲ್ಲಿ ಮದ್ಯ ಸೇವಿಸುವುದು, ಧೂಮಪಾನ ಮಾಡುವುದು ನಿರಂತರವಾಗಿ ನಡೆಯುತ್ತಿದ್ದು ಇದೀಗ ಹುಣಸೆ ಬೀಜಗಳಿಂದ ಆಡುವ ಒಂಟಿ ಜೋಡಿ ಆಟದಲ್ಲಿ ಕೆಲ ಗ್ರಾಮಸ್ಥರು ತೊಡಗಿದ್ದಾರೆ. ಇನ್ನು ಶ್ರೀನಿವಾಸಪುರ ತಾಲೂಕಿನಲ್ಲಿ ಜೂಜಾಟ ಕೋಳಿ ಪಂದ್ಯ ಆಟಗಳು ಮಿತಿಮೀರಿದ್ದು ಪೊಲೀಸರ ಕುಮ್ಮಕ್ಕಿನಿಂದಲೇ ಧಂದೆಕೋರರು ರಾಜಾ ರೋಷವಾಗಿ ಆಟ ಆಡುತ್ತಿರುವುದು ಕೇಳಿ ಬಂದಿದೆ. ಲಕ್ಷಾಂತರ ರೂಪಾಯಿ ಹಣವನ್ನ ಬೆಟ್ಟಿಂಗ್‌ಗೆ ಇಟ್ಟು ಆಡುವ ಜೂಜಾಟದ ಅಡ್ಡಗಳಿಗೆ ಪೊಲೀಸರೆ ರಕ್ಷಣೆ ನೀಡ್ತಿದ್ದಾರೆಂದು ಇತ್ತೀಚೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆರೋಪಿಸಿದ್ದರು. ಇದೀಗ ಶಾಲಾ ಆವರಣದಲ್ಲಿ ಕಾನೂನು ಬಾಹಿರ ಚಟುವಟಿಕೆ ಎಗ್ಗಿಲ್ಲದೆ ನಡೆಯುತ್ತಿದ್ದರು, ತಮಗೂ ಇದಕ್ಕೂ ಯಾವುದೇ ಸಂಬಂಧ ವಿಲ್ಲದಂತೆ ಪೊಲೀಸರು ವರ್ತನೆ ಮಾಡ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ.
ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಮತ್ತು ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಶ್ರೀನಿವಾಸಪುರದಲ್ಲಿ ಜೂಜಾಟ, ಕೋಳಿ ಪಂದ್ಯಗಳ ಜೊತೆಗೆ ಪೊಲೀಸರು ರಸ್ತೆಗಳಲ್ಲಿ ವಾಹನ ಅಡ್ಡಗಟ್ಟಿ ಹಣ ವಸೂಲಿ ಮಾಡುವ ಪ್ರಕರಣ ಹೆಚ್ಚುತ್ತಿದ್ದು, ಇಂತಹ ಅಕ್ರಮಗಳಿಗೆ ನೂತನ ಎಸ್ಪಿಯಾಗಿ ಜಿಲ್ಲೆಗೆ ಆಗಮಿಸಿರುವ ಡೆಕ್ಕಾ ಕಿಶೋರ್ ಬಾಬು ಅವರು ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.