ಕಲಬುರಗಿ:ರಾಜ್ಯ ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ಸಿಎಂ ಬದಲಾವಣೆ ಕೂಗು ಭಾರಿ ಸದ್ದು ಮಾಡುತ್ತಿದೆ, ಹಿರಿಯ ಶಾಸಕ ಬಸನಗೌಡ ಯತ್ನಾಳ, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಸಚಿವ ಸಿ.ಪಿ.ಯೋಗಿಶ್ವರ ಬಹಿರಂಗವಾಗಿಯೇ ಮುಖ್ಯಮಂತ್ರಿ ಬದಲಾವಣೆ ಕುರಿತು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಪದೇ ಪದೇ ದೆಹಲಿಗೆ ತೆರಳಿ ಗರಿಷ್ಠರನ್ನ ಭೇಟಿ ಮಾಡುವ ಮೂಲಕ ತೆರೆಮರೆಯಲ್ಲಿ ಸಿಎಂ ಬದಲಾವಣೆ ಕೂಗಿಗೆ ಇಂಬು ಕೊಡುವ ಕೆಲಸ ನಡೆಯುತ್ತಲೇ ಬಂದಿದೆ. ಆದ್ರೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಹಿಡಿತ ಹೊಂದಿರುವ ಹಾಗೂ ಪ್ರಶ್ನಾತೀತ ವಿರಶೈವ ಲಿಂಗಾಯತ ನಾಯಕರಾಗಿರುವ ಸಿಎಂ ಯಡಿಯೂರಪ್ಪ ಬದಲಾವಣೆ ಅಷ್ಟು ಸುಲಭದ ಮಾತಲ್ಲ ಎಂಬುದು ಬಿಜೆಪಿ ಭಿನ್ನರಿಗೆ ಹಾಗೂ ಬಿಜೆಪಿ ವರಿಷ್ಠರಿಗೂ ಗೊತ್ತಿರುವ ಸಂಗತಿಯಾಗಿದೆ. ಹೀಗಾಗಿಯೇ ಕಾದು ನೋಡುವ ತಂತ್ರಕ್ಕೆ ಮುಂದಾಗಿರುವ ಬಿಜೆಪಿ ಹೈ ಕಮಾಂಡ್ ಆತುರದ ನಿರ್ಧಾರ ಕೈಗೊಳ್ಳುವ ರಿಸ್ಕ್ ತೆಗೆದುಕೊಳ್ಳುತ್ತಿಲ್ಲ. ಬದಲಾಗಿ ಎಲ್ಲರನ್ನು ಸಮಾಧಾನಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿರುವ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಉಸ್ತುವಾರಿ ಅರುಣಸಿಂಗ್ ಅವರನ್ನ ರಾಜ್ಯಕ್ಕೆ ಕಳುಹಿಸಿಕೊಟ್ಟಿದೆ. ಎಲ್ಲ ಶಾಸಕರು ಹಾಗೂ ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಲಿರುವ ಅರುಣಸಿಂಗ್ ರಾಜ್ಯ ಬಿಜೆಪಿಯಲ್ಲಿ ಮೂಡಿರುವ ಭಿನ್ನಮತ ಶಮನಗೊಳಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಇತ್ತ ರಾಜ್ಯಕ್ಕೆ ಅರುಣಸಿಂಗ್ ಬರುತ್ತಿದ್ದಂತೆ ರಾಜ್ಯದ ಹಲವು ಮಠಾಧೀಶರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬೆನ್ನಿಗೆ ನಿಂತು ಬ್ಯಾಟ್ ಬೀಸುತ್ತಿದ್ದಾರೆ.
ಇಂದು ಕಲಬುರಗಿಯಲ್ಲಿ ಸಿಎಂ ಪರವಾಗಿ ಬ್ಯಾಟ್ ಬಿಸಿದ ಶ್ರೀಶೈಲಂನ ಸಾರಾಂಗ ಪೀಠಾಧಿಪತಿ ಶ್ರೀ ಸಾರಂಗಧರೇಶ್ವರ ಮಹಾಸ್ವಾಮೀಜಿ ಬಹಿರಂಗ ಎಚ್ಚರಿಕೆಯೊಂದನ್ನು ನೀಡಿದ್ದು ಸಿಎಂ ಯಡಿಯೂರಪ್ಪನವರು ಸರ್ವ ಜನಾಂಗದ ನಾಯಕರು, 40 ವರ್ಷಗಳ ಕಾಲ ಸತತ ಹೋರಾಟ ಮಾಡಿ ಸಿಎಂ ಆಗಿದ್ದಾರೆ, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೇ ಬಿಜೆಪಿ ಸರ್ವನಾಶವಾಗೋದು ಶತ: ಸಿದ್ದ ಎನ್ನುವ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.