ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ಗೊಂದಲ ಮುಂದುವರಿದ್ದು, ಇದೀಗ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿರುವ ಹುಬ್ಬಳ್ಳಿ- ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದರು. ನಾಳೆ ಅರುಣ್ ಸಿಂಗ್ ಭೇಟಿ ಎಂದ ಬೆಲ್ಲದ್
ಬೊಮ್ಮಾಯಿ ಸೂಚನೆಯಂತೆ ಆರ್.ಟಿ.ನಗರದಲ್ಲಿರುವ ನಿವಾಸಕ್ಕೆ ಬೆಲ್ಲದ್ ಭೇಟಿ ನೀಡಿದರು. ಭೇಟಿ ಬಳಿಕ ಮಾತನಾಡಿದ ಶಾಸಕ ಬೆಲ್ಲದ್. ನಾನು ದೆಹಲಿಗೆ ಹೋಗಿದ್ದ ವಿಚಾರದ ಬಗ್ಗೆ ಮಾತುಕತೆ ಆಡಿದ್ದೇವೆ. ನಾನು ವೈಯುಕ್ತಿಕ ಕೆಲಸದ ಕಾರಣ ದೆಹಲಿಗೆ ಹೋಗಿದ್ದೆ. ಇದನ್ನೇ ಬೊಮ್ಮಾಯಿ ಅವರ ಬಳಿ ಹೇಳಿದ್ದೇನೆ ಎಂದರು. ಕ್ಷೇತ್ರದಲ್ಲಿನ ವಿಚಾರದ ಬಗ್ಗೆ ಬೊಮ್ಮಾಯಿ ಜೊತೆಗೆ ಚರ್ಚೆ ಮಾಡಿದೆ. ನನ್ನ ಕ್ಷೇತ್ರದಲ್ಲಿನ ವಿದ್ಯಾಗಿರಿ ಪೊಲೀಸ್ ಠಾಣೆಯ ವ್ಯಾಪ್ತಿ ಬಹಳ ದೊಡ್ಡದಾಗಿದೆ. ಇದನ್ನು ಎರಡು ಪೊಲೀಸ್ ಠಾಣೆಯಾಗಿ ವಿಂಗಡಿಸಬೇಕಿದೆ. ಈ ನಿಟ್ಟಿನಲ್ಲಿ ನಾನು ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದೇನೆ. ನಾಳೆ ರಾಜ್ಯಕ್ಕೆ ಆಗಮಿಸುವ ಅರುಣ್ ಸಿಂಗ್ ಅವರನ್ನು ಭೇಟಿಯಾಗುತ್ತೇನೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದರು.