ಕೂಗು ನಿಮ್ಮದು ಧ್ವನಿ ನಮ್ಮದು

11 ಜಿಲ್ಲೆಗಳಲ್ಲಿ ಮಾತ್ರ ಲಾಕ್ಡೌನ್ ವಿಸ್ತರಣೆ; ಇನ್ನುಳಿದ ಜಿಲ್ಲೆಗಳು 14ರಿಂದ ಅನ್ಲಾಕ್: ಸಿಎಂ ಯಡಿಯೂರಪ್ಪ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಿರುವ ಮಂಡ್ಯ, ಮೈಸೂರು, ಹಾಸನ, ಶಿವಮೊಗ್ಗ, ಬೆಳಗಾವಿ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರೆಯಲಿದೆ. ಈ ಜಿಲ್ಲೆಗಳಲ್ಲಿ ಈಗ ಅನುಷ್ಠಾನದಲ್ಲಿರುವ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಉಳಿದ ಎಲ್ಲ ಜಿಲ್ಲೆಗಳಲ್ಲಿ ಜೂನ್ 14ರಿಂದ ನಿರ್ಬಂಧ ಸಡಿಲಿಕೆ ಮಾಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಪ್ರತಿದಿನ ರಾತ್ರಿ 7ರಿಂದ ಬೆಳಿಗ್ಗೆ 5ರವರೆಗೆ ಕೊವಿಡ್ ಕರ್ಪ್ಯೂ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಸಂಚಾರಕ್ಕೆ ಅವಕಾಶವಿಲ್ಲ. ನಿರ್ಮಾಣ ಚಟುವಟಿಕೆ ಆರಂಭಿಸಲು ಅನುಮತಿ. ಸಿಮೆಂಟ್, ಸ್ಟೀಲ್ ಅಂಗಡಿ ತೆಗೆಯಲು ಅವಕಾಶವಿದೆ. ಎಲ್ಲ ಕಾರ್ಖಾನೆ ಶೇ 50 ಸಿಬ್ಬಂದಿ ಹಾಜರಿಯೊಂದಿಗೆ ಕಾರ್ಯನಿರ್ವಹಣೇಗೆ ಅವಕಾಶ. ಗಾರ್ಮೆಂಟ್ಸ್ ಶೇ 30 ಹಾಜರಿಯೊಂದಿಗೆ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಮದ್ಯ ಪಾರ್ಸೆಲ್ ಪಡೆಯಲು ಮಧ್ಯಾಹ್ನ 2ರವರೆಗೆ ಅವಕಾಶ ನೀಡಲಾಗುವುದು. ಬಾರ್ ಮತ್ತು ರೆಸ್ಟೋರೆಂಟ್, ವೈನ್ ಸ್ಟೋರ್, ಎಂಎಸ್ಐಎಲ್ಗಳಲ್ಲಿ ಮಧ್ಯಾಹ್ನ 2ರವರೆಗೆ ಪಾರ್ಸೆಲ್ ಅವಕಾಶವಿದೆ ಎಂದು ಅವರು ತಿಳಿಸಿದರು. ಶುಕ್ರವಾರ ಸಂಜೆ ಏಳರಿಂದ ಸೋಮವಾರ ಬೆಳಗ್ಗೆ ಆರರವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಅಲ್ಲದೇ ನೈಟ್ ಕರ್ಫ್ಯೂ ಸಹ ಜಾರಿಯಲ್ಲಿರಲಿದೆ ಎಂದು ಅವರು ತಿಳಿಸಿದರು.ಬೆಳಗ್ಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದ ಎಂಟು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಕೊವಿಡ್ ಲಾಕ್ಡೌನ್ ವಿನಾಯಿತಿ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟದ ಸಹೋದ್ಯೋಗಿಗಳ ಜತೆ ಚರ್ಚೆ ನಡೆಸಿದರು. ಈ ಜಿಲ್ಲೆಗಳಲ್ಲಿ ಅಗತ್ಯ ವಸ್ತು ಖರೀದಿ ಸಮಯ ಹೆಚ್ಚಳ, ಕೈಗಾರಿಕೆಗೆ ವಿನಾಯಿತಿ ನೀಡುವುದು, ಶೇಕಡಾ 50ರಷ್ಟು ಸಿಬ್ಬಂದಿ ಕರ್ತವ್ಯ ನಿರ್ವಹಣೆಗೆ ಅವಕಾಶ, ಸೀಮಿತ ಅವಧಿಗೆ ಪಾರ್ಕ್ ಓಪನ್, ಬಸ್ ಸಂಚಾರ ಹಾಗೂ ಖಾಸಗಿ ವಾಹನ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು. ಕಟ್ಟಡ ನಿರ್ಮಾಣ, ಕೃಷಿ ಕ್ಷೇತ್ರದಲ್ಲಿ ಪೂರ್ತಿ ಅವಕಾಶ ಸಾಧ್ಯತೆ ನೀಡುವ ಸಾಧ್ಯತೆ ವ್ಯಕ್ತವಾಗಿತ್ತು. ಹೆಚ್ಚು ಜನ ಸಂದಣಿಗೆ ಕಾರಣವಾಗುವ ಕ್ಷೇತ್ರಗಳಿಗೆ ವಿನಾಯಿತಿ ನೀಡುವುದು ಅನುಮಾನ ಈ ಮುನ್ನವೇ ವ್ಯಕ್ತವಾಗಿತ್ತು.

error: Content is protected !!