ಕೂಗು ನಿಮ್ಮದು ಧ್ವನಿ ನಮ್ಮದು

ರಾಜ್ಯದ ಖನಿಜ ಸಂಪತ್ತಿನ ಸಮಗ್ರ ಸಮೀಕ್ಷೆಗೆ ನಿರ್ಧಾರ: ಸಚಿವ ಮುರುಗೇಶ ನಿರಾಣಿ

ಬೆಳಗಾವಿ : ರಾಜ್ಯದ ಭೂಮಿಯ ಆಳದಲ್ಲಿರುವ ಖನಿಜ ಸಂಪತ್ತಿನ ಸಮಗ್ರ ಸಮೀಕ್ಷೆಗೆ ಅಂತರರಾಷ್ಟ್ರೀಯ ಟೆಂಡರ್ ಕರೆಯಲಾಗಿದೆ. ಈ ಸಮೀಕ್ಷೆಯಿಂದ ರಾಜ್ಯದಲ್ಲಿರುವ ಒಟ್ಟಾರೆ ಖನಿಜ ಸಂಪತ್ತಿನ ನಿಖರ ಮಾಹಿತಿ ದೊರೆಯಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರಾದ ಮುರುಗೇಶ ನಿರಾಣಿ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು‌ ಮಾತನಾಡಿದರು.

ಒಮ್ಮೆ ರಾಜ್ಯದ ಖನಿಜ ಸಂಪತ್ತಿನ ನಿಖರ ಮಾಹಿತಿ ಲಭಿಸಿದರೆ ಅದರ ಸಮರ್ಪಕ ಬಳಕೆಯ ಯೋಜನೆಯನ್ನು ರೂಪಿಸಬಹುದು.
ಐವತ್ತು ವರ್ಷದ ಹಿಂದಿನ ಸಮೀಕ್ಷೆ ಆಧರಿಸಿ ಖನಿಜ ಸಂಪತ್ತು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಅತ್ಯಾಧುನಿಕ ಸಮೀಕ್ಷೆ ಮೂಲಕ ಖನಿಜ ಸಂಪತ್ತು ಪತ್ತೆ ಮಾಡಿದಾಗ ಪ್ರಸ್ತುತ ಸನ್ನಿವೇಶದಲ್ಲಿ ಕರ್ನಾಟಕ ಅತ್ಯಂತ ಶ್ರೀಮಂತ ರಾಜ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಖನಿಜ ಸಂಪತ್ತಿನ ಸದ್ಬಳಕೆ ಮಾಡುವುದರ ಜತೆಗೆ ಉದ್ಯೋಗಗಳನ್ನು ಸೃಷ್ಟಿಸುವುದು ಕೂಡ ತಮ್ಮ ಆದ್ಯತೆಯಾಗಿದೆ ಎಂದು ಸಚಿವ ಮುರುಗೇಶ ನಿರಾಣಿ ತಿಳಿಸಿದರು. ವಿಭಾಗಾವಾರು ಮೈನಿಂಗ್ ಅದಾಲತ್ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ಗಣಿಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕೂಡ ಈಗಾಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಮರಳನ್ನು ಗ್ರೇಡ್ ಪ್ರಕಾರ ವಿಂಗಡಿಸಿ ಅಗತ್ಯತೆ ಆಧರಿಸಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಿತಿಗಳ ಮೂಲಕ ವಿತರಣೆಗೆ ಅನುಕೂಲವಾಗುವಂತೆ ಸ್ಯಾಂಡ್ ಕಾರ್ಪೋರೇಷನ್ ಸ್ಥಾಪಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ‌ಚಿಂತನೆ ನಡೆಸಲಾಗುತ್ತಿದೆ. ಈ ಬಗ್ಗೆ ಕೂಡ ಶೀಘ್ರ ಸೂಕ್ತ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

error: Content is protected !!