ಚಿಕ್ಕೋಡಿ: ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಹೋಬಳಿ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ಐಗಳಿ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಹಲವು ಬಾರಿ ಹೇಳಿಕೊಂಡಾಗಲೂ ಕೂಡ ಸಮಸ್ಯೆ ಪರಿಹಾರವಾಗದ ಹಿನ್ನೆಲೆಯಲ್ಲಿ ಇಂದು ಪಂಚಾಯತಿ ಅಧ್ಯಕ್ಷೆ ರಾಜಶ್ರೀ ಶಂಕರಗೌಡ ಪಾಟೀಲ ಐಗಳಿ ಗ್ರಾಮಕ್ಕೆ ಹೊಸ ಆಸ್ಪತ್ರೆ ನಿರ್ಮಾಣ ಮತ್ತು ಸಿಬ್ಬಂದಿ ನಿಯೋಜನೆ ಮಾಡುವಂತೆ ಮನವಿ ಸಲ್ಲಿಸಿದರು. ಈಗಾಗಲೇ ಐಗಳಿ ಗ್ರಾಮದಲ್ಲಿ ಎಂಟು ಜನರು ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಅಲ್ಲದೆ ಕೊರೊನಾ ಪ್ರಾಥಮಿಕ ಚಿಕಿತ್ಸೆ ಕೊಡುವದಕ್ಕು ಅಸಾಧ್ಯ ಎನ್ನುವ ಸ್ಥಿತಿಯಲ್ಲಿ ಆಸ್ಪತ್ರೆ ಇದ್ದು ಸಾಧ್ಯವಾದಷ್ಟು ಬೇಗ ಆಸ್ಪತ್ರೆ ನಿರ್ಮಾಣಕ್ಕೆ ಒತ್ತು ಕೊಡಬೇಕು ಎಂಬ ಮಾತುಗಳು ಕೇಳಿಬಂದವು.
ಇನ್ನೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ಸಭೆಯ ವೇಳೆ ಗ್ರಾಮಸ್ಥರು ಸ್ವಪ್ರೇರಿತವಾಗಿ ಸಂಪೂರ್ಣ ಲಾಕ್ ಡೌನ ಮಾಡಿರುವದಕ್ಕೆ ಹರ್ಷ ವ್ಯಕ್ತಪಡಿಸಿದ ಶಾಸಕ ಮಹೇಶ್ ಕುಮಠಳ್ಳಿ ಕೊರೊನಾ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವದರ ಜೊತೆಗೆ ಪ್ರಂಟ್ ಲೈನ್ ವಾರಿಯರ್ ಗಳು ತಮ್ಮ ಆರೋಗ್ಯದ ಕಡೆಗೂ ಗಮನಹರಿಸಬೇಕು ಎಂದರು. ಈ ವೇಳೆ ಅಥಣಿ ಡಿಎಸ್ ಪಿ ಎಸ್.ವಿ.ಗಿರೀಶ್, ಸಿಪಿಐ ಶಂಕರಗೌಡ ಬಸನಗೌಡರ, ಐಗಳಿ ಪಿಎಸ್ಐ ಮಹಮ್ಮದ ಘೋರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.