ಬೆಂಗಳೂರು: ರಂಗಭೂಮಿ, ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದ ಹಿರಿಯ ನಟ ಬಿ. ಎಂ ಕೃಷ್ಣೇಗೌಡ ಕೊನೆಯುಸಿರೆಳೆದಿದ್ದಾರೆ. 80 ವರ್ಷದವರಾಗಿದ್ದ ಕೃಷ್ಣೇಗೌಡ ಅವರಿಗೆ 20 ದಿನಗಳ ಹಿಂದೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಕೋವಿಡ್ ಟೆಸ್ಟ್ ನೆಗೆಟಿವ್ ಸಹ ಬಂದಿತ್ತಂತೆ. ನಂತರ ಮನೆಗೆ ಮರಳಿದ್ದ ಕೃಷ್ಟೇಗೌಡ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಗುಣಮುಖರಾಗಿ ಮನೆಗೆ ಮರಳಿದ ನಂತರವೂ ಕೃಷ್ಣೇಗೌಡ ಅವರಿಗೆ ಶ್ವಾಸಕೋಶದ ಸಮಸ್ಯೆ ಮತ್ತೆ ಕಾಣಿಸಿಕೊಂಡಿತ್ತು ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ಕನ್ನಡದ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ರಂಗಭೂಮಿ ಹಿನ್ನಲೆ ಹೊಂದಿರುವ ಕೃಷ್ಣೇಗೌಡ ಅವರು ಸಾಕಷ್ಟು ನಾಟಕಗಳಲ್ಲೂ ಬಣ್ಣ ಹಚ್ಚಿದ್ದಾರೆ.
ಮುಖ್ಯಮಂತ್ರಿ ನಾಟಕದ ಖಾಯಂ ಕಲಾವಿದರಾಗಿದ್ದ ಬಿ.ಎಂ.ಕೃಷ್ಣೇಗೌಡ ಅವರು ಅಬ್ಬೂರು ಜಯತೀರ್ಥ, ಆರ್.ನಾಗೇಶ್, ಶ್ರೀನಿವಾಸ ಪ್ರಭು, ಬಿ.ವಿ.ರಾಜಾರಾಂ ಸೇರಿದಂತೆ ಇತರೆ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ಕರ್ನಾಟಕ ರಾಜ್ಯದ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಕೆಲಸ ಮಾಡುತ್ತಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಸಿನಿರಂಗದಲ್ಲಿ ಪೋಷಕರ ಪಾತ್ರಗಳಲ್ಲಿ ಮಿಂಚುತ್ತಿದ್ದ ಇವರಿಗೆ ಪೋಷಕ ಪಾತ್ರಕ್ಕಾಗಿ ರಾಜ್ಯ ಪ್ರಶಸ್ತಿ ಸಹ ಸಿಕ್ಕಿದೆ. ಬಣ್ಣದ ಲೋಕದ ಜತೆಗೆ ಕ್ರೀಡಾ ಕ್ಷೇತ್ರದಲ್ಲೂ ಹೆಸರು ಮಾಡಿದ್ದರು. ರಾಜ್ಯ ಮಟ್ಟದ ವಾಲಿಬಾಲ್ ಆಟಗಾರರಾಗಿದ್ದರು.
ಕೊರೋನಾದಿಂದಾಗಿ ಸ್ಯಾಂಡ್ ವುಡ್ ನಲ್ಲಿ ಒಂದರ ಹಿಂದೆ ಒಂದು ಕಹಿ ಘಟನೆಗಳು ನಡೆಯುತ್ತಿವೆ. ಕಲಾ ಸೇವೆ ಮಾಡುತ್ತಿರುವ ಹಲವಾರು ಮಂದಿ ಕಲಾವಿದರು ಕೊರೋನಾಗೆ ಬಲಿಯಾಗುತ್ತಿದ್ದಾರೆ. ಶಂಖನಾದ ಅರವಿಂದ್, ರೇಣುಕಾ ಶರ್ಮಾ, ರಾಮು, ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ರಾಜಾರಾಂ, ಕನ್ನಡ ಸಿನಿಮಾದ ನಿರ್ಮಾಪಕ ಹಾಗೂ ವಿತರಕ ದೀಪಕ್ ಸಾಮಿದೊರೈ ಸೇರಿದಂತೆ ಹಲವರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.
ಕೊರೋನಾ ವೈರಸ್, ಹೃದಯಾಘಾತ ಸೇರಿದಂತೆ ಇತರೆ ಕಾಯಿಲೆಗಳಿಂದ ಸ್ಯಾಂಡಲ್ ವುಡ್ ಕಲಾವಿದರು ಸಾವನ್ನಪ್ಪಿದ್ದಾರೆ. ಅದರಲ್ಲೂ ಇತ್ತೀಚೆಗಷ್ಟೆ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಶ್ರೀರಂಗ ಅವರು ನಿಧನರಾಗಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸಿನಿಮಾ ಹಾಡುಗಳನ್ನು ಬರೆದಿರುವ ಗೀತೆಗಳ ಸಾಹಿತಿ ಇನ್ನಿಲ್ಲ. ನಂಜುಂಡಿ ಕಲ್ಯಾಣ, ಆಸೆಗೊಬ್ಬ ಮೀಸೆಗೊಬ್ಬ, ಜನುಮದ ಜೋಡಿ, ರಕ್ತ ಕಣ್ಣೀರು ಸೇರಿದಂತೆ ಹಲವು ಸಿನಿಮಾಗಳಿಗೆ ಹಿಟ್ ಹಾಡುಗಳನ್ನು ಬರೆದಿದ್ದಾರೆ. ಅಂಜದ ಗಂಡು, ಕಿಂದರಿ ಜೋಗಿ, ಮುತ್ತೈದೆ ಭಾಗ್ಯ, ಭೂಲೋಕದಲ್ಲಿ ಯಮ ರಾಜ ಸೇರಿದಂತೆ ಹಲವು ಚಿತ್ರಗಳಿಗೆ ಸಂಭಾಷಣೆ ಸಹ ಬರೆದಿದ್ದರು.
ಕಳೆದ ಕೆಲವು ವಾರಗಳಿಂದ ಕೋವಿಡ್ ಸೋಂಕಿಗೆ ಸ್ಯಾಂಡಲ್ವುಡ್ನ ಸರಿ ಸುಮಾರು ಹತ್ತುಕ್ಕೂ ಹೆಚ್ಚು ಮಂದಿ ಸೆಲೆಬ್ರಿಟಿಗಳು ಬಲಿಯಾಗಿದ್ದಾರೆ. ಮೇ 2 ರಂದು ಮಿಸ್ಡ್ ಕಾಲ್ ಎಂಬ ಸಿನಿಮಾ ನಿರ್ಮಿಸಿದ್ದ ಚಂದ್ರ ಅವರು ಕೊರೋನಾ ಸೋಂಕಿಗೆ ಬಲಿಯಾಗಿದ್ದರು. ಹಾಗೇ ಮೇ 1ರಂದು 2011ರಲ್ಲಿ ಒನ್ ಡೇ ಎಂಬ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ನವೀನ್ ಕುಮಾರ್ ಕೊರೊನಾ ಸೋಂಕಿನಿಂದ ಕೊನೆಯುಸಿರೆಳೆದಿದ್ದರು. ಅವರಿಗೆ ಕೇವಲ 36 ವರ್ಷ ವಯಸ್ಸಾಗಿತ್ತು. ಏಪ್ರಿಲ್ 22ರಂದು ಹಿರಿಯ ನಿರ್ಮಾಪಕ ಅಣ್ಣಯ್ಯ, ಬಿಂದಾಸ್, ರನ್ನ ಸಿನಿಮಾಗಳನ್ನು ನಿರ್ಮಿಸಿದ್ದ ಎಂ. ಚಂದ್ರಶೇಖರ್ ಅವರು ಕೊವಿಡ್ಗೆ ಬಲಿಯಾಗಿದ್ದರು. ಹಾಗೇ ಕರ್ನಾಟಕ ಚಲನಚಿತ್ರ ವರ್ಣಾಲಂಕಾರ ಕಲಾವಿದರ ಸಂಘದ ಉಪಾಧ್ಯಕ್ಷ ಆರ್. ಶ್ರೀನಿವಾಸ್ ಕೂಡ ಕೆಲ ದಿನಗಳ ಹಿಂದಷ್ಟೇ ಈ ಮಹಾಮಾರಿಗೆ ತುತ್ತಾಗಿದ್ದಾರೆ.