ಬೆಳಗಾವಿ: ಲಾಕ್ಡೌನ್ ಮುಗಿಯುವದರೊಳಗೆ ಕೊರೊನಾ ನಿಯಂತ್ರಣಕ್ಕೆ ತರಲು ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ಅನ್ನು ಇನ್ನಷ್ಟು ತೀವ್ರಗೋಳಿಸಲಾಗುವದು ಎಂದು ಜಿಲ್ಲಾಧಿಕಾರಿ ಎಮ್.ಜಿ.ಹಿರೇಮಠ ಹೇಳಿದರು. ಇಂದು ಬೆಳಗಿನ ಜಾವ ಹುಕ್ಕೇರಿಯ ಕ್ಯಾರಗುಡ್ಡದ ಕೋವಿಡ್ ಕೇರ್ ಸೇಂಟರಗೆ ಭೇಟಿ ನೀಡಿ ಆಹಾರ ತಯಾರಿಕೆ ಘಟಕ, ವೈದ್ಯಕೀಯ ಘಟಕ ಮತ್ತು ಸೋಂಕಿತರ ಆರೈಕೆ ಘಟಕದ ವ್ಯವಸ್ಥೆಯನ್ನು ಪರಿಶೀಲಿಸಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಗ್ರಾಮಿಣ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇಂದಿನಿಂದ ಜಿಲ್ಲೆಯ ಎಲ್ಲಾ ಲ್ಯಾಬ್ ಟೆಕ್ನಿಶಿಯನ್ ಗಳನ್ನು ಒಳಗೊಂಡ ತಾಲೂಕಾ ಮಟ್ಟದ ಟಾಕ್ಸಫೋರ್ಸ ಕಮಿಟಿಯೊಂದಿಗೆ ತಂಡ ರಚಿಸಿ ಸೋಂಕಿನ ಲಕ್ಷಣ ಇರುವವರ ಮನೆಗಳಿಗೆ ತೇರಳಿ ಸ್ಥಳದಲ್ಲಿಯೇ ರ್ಯಾಪಿಡ್ ಆಂಟಿಜಿನ್ ಟೆಸ್ಟ್ ಮಾಡಲಾಗುವದು ಕಾರಣ ಗ್ರಾಮಸ್ಥರು ಪರಿಕ್ಷೆಗೆ ಸಹಕರಿಸಬೇಕು, ಅಲ್ಲದೆ ಕೊರೊನಾ ಸೋಂಕಿತರ ಪರೀಕ್ಷೆ ಹಾಗೂ ಸೂಕ್ತ ಚಿಕಿತ್ಸೆ ನೀಡುವ ಸಲುವಾಗಿ ವೈದ್ಯರು ಮತ್ತು ವೈದ್ಯ ಸಿಬ್ಬಂದಿಗಳು ಹಳ್ಳಿಗಳಿಗೆ ತೆರಳಿ ‘ವೈದ್ಯರ ನಡೆ ಹಳ್ಳಿಯ ಕಡೆ’ ಎಂಬ ನೂತನ ಕಾರ್ಯಕ್ರಮವನ್ನು ಇಂದು ಹುಕ್ಕೇರಿ ತಾಲೂಕಿನ ಹುಲ್ಲೋಳಿಹಟ್ಟಿ ಗ್ರಾಮದಿಂದ ಪ್ರಾರಂಭಿಸಲಾಗಿದೆ. ಸೋಂಕಿತರು ಮನೆಯಲ್ಲೇ ಇರದೆ ಕೋವಿಡ್ ಕೇರ್ ಸೆಂಟರಗಳಿಗೆ ತೆರಳಿ ಚಿಕಿತ್ಸೆ ಪಡೆಯಬೇಕು, ಇದರಿಂದಾಗಿ ಹರಡುವಿಕೆಯನ್ನು ತಡೆಯಬಹುದಾಗಿದೆ ಕಾರಣ ಜನರು ಭಯಭಿತರಾಗದೆ ಸರ್ಕಾರದ ನಿಯಮಗಳನ್ನು ಪಾಲಿಸಿ ಜಿಲ್ಲಾಡಳಿತದೊಂದಿಗೆ ಕೈ ಜೋಡಣೆಸಬೇಕು ಎಂದರು.
ಈ ಸಂದರ್ಭದಲ್ಲಿ ತಹಸಿಲ್ದಾರ ಡಾ.ಡಿ ಎಚ್ ಹೂಗಾರ, ಸಿಪಿಐ ರಮೇಶ ಛಾಯಾಗೋಳ, ಅಕ್ಷರ ದಾಸೋಹ ಸಹಾಯಕ ನಿದೆರ್ಶಕ ಶ್ರೀಶೈಲ್ ಹಿರೇಮಠ, ಆರೋಗ್ಯ ಅಧಿಕಾರಿ ಉದಯ ಕುಡಚಿ, ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಸಿದ್ನಾಳ, ಬಿಇಓ ಮೋಹನ ದಂಡಿನ, ಪರಿಶಿಷ್ಟ ಪಂಗಡಗಳ ಅಧಿಕಾರಿ ವಿ.ಎಮ್.ನಾಗನೂರಿ, ಕಂದಾಯ ನಿರೀಕ್ಷಕ ಪ್ರವೀಣ ಮಾಳಾಜ, ಗ್ರಾಮ ಲೆಕ್ಕಾಧಿಕಾರಿ ಎನ್.ಆರ್.ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.