ಕೂಗು ನಿಮ್ಮದು ಧ್ವನಿ ನಮ್ಮದು

ನನ್ನಿಂದ ಯಾವುದೇ ಕೆಲಸ ಆಗಬೇಕಿದ್ದರೂ ಸರಿ, ಅಧಿಕಾರಿಗಳು ನನಗೆ ನೇರವಾಗಿ ಕರೆ ಮಾಡಿ: ಮಾಜಿ ಸಿಎಂ ಕುಮಾರಸ್ವಾಮಿ ಸೂಚನೆ

ರಾಮನಗರ: ರಾಮನಗರ ಜಿಲ್ಲೆಯ ಕೋವಿಡ್ ಸ್ಥಿತಿಗತಿಗಳ ಕುರಿತು ತಹಶಿಲ್ದಾರಗಳೊಂದಿಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ವರ್ಚುವಲ್ ಸಭೆ ನಡೆಸಿದರು. ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ, ಮಾಗಡಿ ಶಾಸಕ ಎ.ಮಂಜು, ರಾಮನಗರ ಜಿಲ್ಲೆಯ ನಾಲ್ಕು ತಾಲೂಕುಗಳ ತಹಶಿಲ್ದಾರರು ವರ್ಚುವಲ್ ಸಭೆಯಲ್ಲಿ ಭಾಗವಹಿಸಿದರು. ತಹಶಿಲ್ದಾರರ ಜೊತೆಯಲ್ಲಿ ಕುಮಾರಸ್ವಾಮಿ ಮಾತುಕತೆ ನಡೆಸಿದರು. ಶಾಸಕರೂ ತಮ್ಮ ಕ್ಷೇತ್ರಗಳ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದರು.

ಸಮರ್ಪಕ ಪರೀಕ್ಷೆ, ಸೂಕ್ತ ಚಿಕಿತ್ಸೆ, ಆಸ್ಪತ್ರೆಗಳಲ್ಲಿ ಶುಚಿತ್ವ ಕಾಪಾಡುವಂತೆ ಕುಮಾರಸ್ವಾಮಿ ಸಲಹೆ ನೀಡಿದರು. ಆರೈಕೆ ಕೇಂದ್ರಗಳಲ್ಲಿ ಆಹಾರಕ್ಕೆ ಯಾವುದೇ ತೊಂದರೆಯಾಗದಂತೆ ಗಮನಹರಿಸುವಂತೆ ಸೂಚಿಸಿದರು.
ರಾಮನಗರದಲ್ಲಿ ಆಂಬ್ಯುಲೆನ್ಸ್ ಕೊರತೆ ಇರುವುದಾಗಿ ತಹಶೀಲ್ದಾರ್ ಹೇಳಿದರು. ಸೋಮವಾರದ ಒಳಗಾಗಿ ಆಂಬ್ಯುಲೆನ್ಸ್ ಒದಗಿಸುವುದಾಗಿ ಕುಮಾರಸ್ವಾಮಿ ಕ್ಷಣದಲ್ಲೇ ತಿಳಿಸಿದರು. ತಕ್ಷಣಕ್ಕೆ ಒಂದು ಆಂಬ್ಯುಲೆನ್ಸ್ನ ಅಗತ್ಯವಿರುವುದಾಗಿ ತಹಶೀಲ್ದಾರ್ ಹೇಳಿದರು. ಎರಡು ಆಂಬ್ಯುಲೆನ್ಸ್ ಗಳನ್ನು ನೀಡುವುದಾಗಿ ಎಚ್ಡಿಕೆ ತಿಳಿಸಿದರು.

ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು ಆದಷ್ಟು ಜನರ ಹಿತಕ್ಕಾಗಿ ನಾವು ಕೆಲಸ ಮಾಡೋಣ ಎಂದು ಕುಮಾರಸ್ವಾಮಿ ತಿಳಿಸಿದರು. ಜೊತೆಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಆಗಬಾರದು, ಯಾರೇ ಆಗಲಿ ಸೋಂಕು ಕಂಡ ತಕ್ಷಣ ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ ಎಂದು ಮನವಿ ಮಾಡಿದರು. ಇನ್ನು ನನ್ನಿಂದ ಯಾವುದೇ ಕೆಲಸ ಆಗಬೇಕಾದರೂ ಸರಿಯೇ ಅಧಿಕಾರಿಗಳು ನನಗೆ ನೇರವಾಗಿ ಕರೆ ಮಾಡಿ ತಿಳಿಸಿ, ನಾನು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆಂದು ತಿಳಿಸಿದರು.

error: Content is protected !!