ದೆಹಲಿ: ಕೊರೊನಾ ಎರಡನೇ ಅಲೆಯ ಜೊತೆ ದೇಶದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿನ ಪ್ರಕರಣಗಳೂ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವುದು ಜನಸಾಮಾನ್ಯರ ಚಿಂತೆಗೆ ಕಾರಣವಾಗಿದೆ. ಬ್ಲ್ಯಾಕ್ ಫಂಗಸ್ (ಮ್ಯುಕೋರ್ಮೈಕೋಸಿಸ್)ಗೆ ಸಂಬಂಧಿಸಿದಂತೆ ದೆಹಲಿಯ ಪ್ರತಿಷ್ಠಿತ ವೈದ್ಯ ವಿಜ್ಞಾನ ಸಂಸ್ಥೆ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದ್ದು, ಸೋಂಕನ್ನು ಹೇಗೆ ಗುರುತಿಸಬೇಕು ಹಾಗೂ ಅದಕ್ಕೆ ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದನ್ನು ವಿವರಿಸಿದೆ.
ಅನಿಯಂತ್ರಿತ ಮಧುಮೇಹ ಹೊಂದಿರುವವರು ಹಾಗೂ ಅತಿ ಹೆಚ್ಚು ಸ್ಟಿರಾಯ್ಡ್ ಬಳಕೆ ಮಾಡುವವರು ಬ್ಲ್ಯಾಕ್ ಫಂಗಸ್ ಸೋಂಕಿಗೆ ಬಲುಬೇಗನೆ ತುತ್ತಾಗುತ್ತಾರೆ. ಇದು ಅಪರೂಪದ ಸೋಂಕಾದರೂ ಉಲ್ಬಣಿಸಿದರೆ ಸಾವು ಸಂಭವಿಸುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಸುಮಾರು 90 ಜನ ಸೋಂಕಿನಿಂದ ಮೃತರಾಗಿದ್ದಾರೆ. ರಾಜಸ್ಥಾನದಲ್ಲಿ 100ಕ್ಕೂ ಹೆಚ್ಚು ಸೋಂಕಿತರು ಕಂಡು ಬಂದಿದ್ದು, ಅಲ್ಲಿನ ರಾಜ್ಯ ಸರ್ಕಾರ ಬ್ಲ್ಯಾಕ್ ಫಂಗಸ್ ಸಾಂಕ್ರಾಮಿಕ ಕಾಯಿಲೆ ಎಂದು ಘೋಷಿಸಿದೆ. ಅಲ್ಲದೇ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್ ಗಳನ್ನು ಕೂಡಾ ಸಿದ್ಧಪಡಿಸಿದೆ.
- ಅನಿಯಂತ್ರಿತ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು
- ಅತಿ ಹೆಚ್ಚು ಸ್ಟೀರಾಯ್ಟ್ ಬಳಕೆಯಲ್ಲಿರುವವರು
- ರೋಗನಿರೋಧಕ ಶಕ್ತಿ ಶಮನ ಮಾಡುವ ಔಷಧ ಸೇವಿಸುತ್ತಿರುವವರು
- ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿರುವವರು
- ದೀರ್ಘಕಾಲದ ಅನಾರೋಗ್ಯ ಸಮಸ್ಯೆಯುಳ್ಳವರು
- ಅತಿಯಾದ ಶೀತ, ಥಂಡಿ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಉಸಿರಾಟದ ಸಮಸ್ಯೆಯಿದ್ದು ಮಡಿಕಲ್ ಆಕ್ಸಿಜನ್ ಸಹಾಯ ಪಡೆಯುವವರು.
ಇವರೆಲ್ಲರೂ ಬ್ಲ್ಯಾಕ್ ಫಂಗಸ್ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿದ್ದು, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.
- ಮೂಗಿನಿಂದ ಅಸಹಜ ಕಪ್ಪು ವಿಸರ್ಜನೆ, ರಕ್ತ ಬರುವುದು
- ಮೂಗಿನಲ್ಲಿ ಕಿರಿಕಿರಿ, ತಲೆನೋವು, ಕಣ್ಣಿನ ನೋವು, ಕಣ್ಣಿನ ಸುತ್ತ ಊತ, ಎರಡೆರಡು ದೃಷ್ಟಿ, ಕಣ್ಣು ಕೆಂಪಾಗುವುದು, ಕಾಣದಿರುವುದು, ಅಸ್ಪಷ್ಟತೆ, ಕಣ್ಣು ತೆರೆಯುವುದಕ್ಕೆ ಹಾಗೂ ಮುಚ್ಚುದಕ್ಕೆ ಕಷ್ಟವಾಗುವುದು
- ಮುಖ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವ ಅನುಭವ
- ಆಹಾರ ಸೇವಿಸುವ ವೇಳೆ ನೋವು, ಬಾಯಿ ತೆರೆಯಲು ಕಷ್ಟವಾಗುವುದು
- ಮುಖದಲ್ಲಿ ಊತ, ಕಪ್ಪುಗಟ್ಟುವಿಕೆ, ಗಟ್ಟಿಯಾಗುವಿಕೆ, ನೋವು ಕಾಣಿಸಿಕೊಳ್ಳುವುದು
- ಹಲ್ಲು ಉದರುವುದು, ಬಾಯಿ ಒಳಗೂ ಕಪ್ಪು ಬಣ್ಣ ಹಾಗೂ ಊತ ಕಾಣಿಸಿಕೊಳ್ಳುವುದು
ಇವು ಬ್ಲ್ಯಾಕ್ ಫಂಗಸ್ ಸೋಂಕಿನ ಕೆಲ ಪ್ರಮುಖ ಲಕ್ಷಣಗಳು
- ಬ್ಲ್ಯಾಕ್ ಫಂಗಸ್ ಪತ್ತೆಯಾದಾಗ ENT ವೈದ್ಯರು, ಕಣ್ಣಿನ ವೈದ್ಯರು ಅಥವಾ ಸೂಕ್ತ ತಜ್ಞರ ಬಳಿ ತೆರಳಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು
- ರಕ್ತದಲ್ಲಿನ ಮಧುಮೇಹ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ಸೂಕ್ತ ಕ್ರಮ ಅನುಸರಿಸಬೇಕು
- ಇತರ ಆರೋಗ್ಯ ಸಮಸ್ಯೆಗಳಿದ್ದರೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದನ್ನು ತಪ್ಪಿಸಬಾರದು
- ವೈದ್ಯರನ್ನು ಕೇಳದೆ ಯಾವ ಕಾರಣಕ್ಕೂ ಸ್ಟಿರಾಯ್ಡ್ ಹಾಗೂ ಆಯಂಟಿ ವೈರಲ್ ಡ್ರಗ್ ಪಡೆಯಬಾರದು
- ವೈದ್ಯರ ಸಲಹೆ ಮೇರೆಗೆ MRI, ಸಿಟಿ ಸ್ಕ್ಯಾನ್ ಮಾಡಿಸಬೇಕು