ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ. ಮಹಾಮಾರಿ ಈಗಾಗಲೇ ಜಿಲ್ಲೆಯ ಪ್ರತಿ ಹಳ್ಳಿಗೆ, ಗಲ್ಲಿ ಗಲ್ಲಿಗಳಿಗೆ ವ್ಯಾಪಕವಾಗಿ ಹರಡಿ ಆಗಿದೆ. ಇದಕ್ಕೆ ಲಗಾಮು ಹಾಕಲು ಬೆಳಗಾವಿ ಜಿಲ್ಲಾಡಳಿತ ಇಂದು ಮತ್ತು ನಾಳೆ ಭಾನುವಾರ ಸಂಪೂರ್ಣವಾಗಿ ಲಾಕ್ ಡೌನ್ ಘೋಷಣೆ ಮಾಡಿ ಈಗಾಗಲೇ ಆದೇಶಿಸಿದ ಹಿನ್ನಲೆ, ಬೆಳಿಗ್ಗೆಯಿಂದಲೇ ಕುಂದಾನಗರಿ ಬೆಳಗಾವಿ ಸಂಪೂರ್ಣ ಸ್ತಬ್ಧವಾಗಿದೆ. ಬೆಳಿಗ್ಗೆ ಸೂರ್ಯ ಉದಯಿಸುವ ಮುನ್ನವೇ ಬೆಳಗಾವಿ ಪೋಲೀಸರು ಫೀಲ್ಡ್ ಗೆ ಇಳಿದಿದ್ದಾರೆ. ಬೆಳಗಾವಿ ನಗರದ ಎಲ್ಲ ಪೋಲೀಸ್ ಠಾಣೆಗಳ ಹಿರಿಯ ಅಧಿಕಾರಿಗಳು ತಮ್ಮ ಏರಿಯಾಗಳಲ್ಲಿ ರೌಂಡ್ಸ್ ಹಾಕುತ್ತಿದ್ದು, ಬೆಳಗಾವಿ ನಗರದ ಎಲ್ಲ ಸರ್ಕಲ್ ಗಳಲ್ಲಿ ಬಿಗಿ ಪೋಲೀಸ್ ಪಹರೆ ಹಾಕಲಾಗಿದೆ.
ಇನ್ನು ನಗರದ ಎಲ್ಲಾ ಗಲ್ಲಿಗಳಲ್ಲಿ ಮೌನ, ಮಾರುಕಟ್ಟೆಗಳು ಸ್ತಬ್ಧವಾಗಿದ್ದು, ರಸ್ತೆಗಳಲ್ಲಿ ಅಲ್ಲೊಂದು, ಇಲ್ಲೊಂದು ವಾಹನಗಳ ಓಡಾಟ ಬಿಟ್ಟರೆ, ಜನ ಮನೆಗಳಲ್ಲಿಯೇ ಲಾಕ್ ಆಗಿದ್ದಾರೆ. ಹಾಲು, ಔಷಧಿ ಬಿಟ್ಟರೆ ಉಳಿದ ಯಾವ ಅಂಗಡಿಯೂ ತೆರದಿಲ್ಲ. ಬೆಳಗಾವಿಯ ಮಹಾಂತೇಶ ನಗರದ ರಾಷ್ಟ್ರೀಯ ಹೆದ್ದಾರಿ ಸೇತುವೆ, ಅಶೋಕ ವೃತ್ತ, ಚನ್ನಮ್ಮ ಸರ್ಕಲ್ ನಲ್ಲಿ ಪೋಲೀಸರು ಪ್ರತಿಯೊಬ್ಬರನ್ನು ವಿಚಾರಣೆ ಮಾಡಿ ನಗರ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದಾರೆ. ಇನ್ನು ವೈದ್ಯಕೀಯ ಸಿಬ್ಬಂದಿ, ಹಾಲು ಮಾರಾಟದ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಬೆಳಗಾವಿ ಡಿಸಿಪಿ ವಿಕ್ರಂ ಅಮಟೆ ಅವರು ನಗರದಲ್ಲಿ ಸಂಪೂರ್ಣ ಲಾಕ್ ಡೌನ್ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಮಾಂಡ್ ಮಾಡುತ್ತಿದ್ದು ಅವರೂ ಬೆಳಿಗ್ಗೆಯಿಂದಲೇ ನಗರದಲ್ಲಿ ರೌಂಡ್ಸ್ ಹಾಕಿತ್ತಿದ್ದಾರೆ. ಇವತ್ತು ಮತ್ತು ನಾಳೆ ಸಂಪೂರ್ಣ ಲಾಕ್ ಡೌನ್ ಹೀಗಾಗಿ ಮನೆಯಿಂದ ಹೊರಗೆ ಬಂದ್ರೆ, ಪೋಲೀಸರು ಲಾಠಿ ಬೀಸುವದರಲ್ಲಿ ಡೌಟೇ ಇಲ್ಲ. ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳು ಸೀಜ್ ಆಗ್ತಾವೆ, ಹೀಗೆ ಬೆಳಗಾವಿಯಲ್ಲಿ ಈಗಾಗಲೇ ಖಡಕ್ ಲಾಕ್ ಡೌನ್ ಜಾರಿಯಲ್ಲಿದೆ. ಪ್ರತಿದಿನ ಬೆಳಗಿನ ಜಾವ ಐದು ಗಂಟೆಗೆ ಸದ್ದು ಮಾಡುತ್ತಿದ್ದ ರವಿವಾರ ಪೇಠೆ ಶಾಂತವಾಗಿದೆ, ಎಪಿಎಂಸಿ ಯಲ್ಲಿ ಪಿನ್ ಡ್ರಾಪ್ ಸೈಲನ್ಸ್, ಫ್ರುಟ್ ಹಣ್ಣಿನ ಮಾರುಕಟ್ಟೆಯೂ ಸ್ತಬ್ಧವಾಗಿದ್ದು ಬೆಳಗಾವಿ ನಗರದಲ್ಲಿ ಖಾಕಿ ಪಹರೆ ಖಡಕ್ ಆಗಿದೆ.