ಸೋಂಕಿತರನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಿಸಲು ಸೂಚನೆ
ಬೆಳಗಾವಿ: ಕೋವಿಡ್ ಸೋಂಕಿತರ ಮನವೊಲಿಸಿ ತಾಲ್ಲೂಕು ಮಟ್ಟದಲ್ಲಿ ಆರಂಭಿಸಲಾಗಿರುವ ಕೋವಿಡ್ ಕೇರ್ ಕೇಂದ್ರಗಳಲ್ಲಿ ಸರಕಾರದ ಮಾರ್ಗಸೂಚಿ ಪ್ರಕಾರ ಪ್ರತ್ಯೇಕವಾಗಿರಿಸುವ ಮೂಲಕ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಸೂಚನೆ ನೀಡಿದರು. ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಇಂದು ಮಂಗಳವಾರ ಚಿಕ್ಕೋಡಿ ಮತ್ತು ರಾಯಬಾಗ ತಾಲ್ಲೂಕುಗಳಲ್ಲಿ ನಡೆದ ವಿವಿಧ ತಾಲ್ಲೂಕುಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ತಡೆಗಟ್ಟುವುದಕ್ಕೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಲಕ್ಷಣರಹಿತ ಸೋಂಕಿತರಿಗೆ ಆಯಾ ತಾಲ್ಲೂಕುಗಳಲ್ಲಿ ಐಸೋಲೇಷನ್ ಹಾಗೂ ಚಿಕಿತ್ಸೆಗೆ ಅನುಕೂಲವಾಗುವಂತೆ ಜಿಲ್ಲೆಯಾದ್ಯಂತ ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಆದ್ದರಿಂದ ಸೋಂಕಿತರನ್ನು ಕಡ್ಡಾಯವಾಗಿ ಈ ಕೇಂದ್ರಗಳಲ್ಲಿರಿಸುವುದರಿಂದ ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದು ಎಂದು ಹೇಳಿದರು. ತುರ್ತು ಚಿಕಿತ್ಸೆ ಅಗತ್ಯವಿರುವವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಬೇಕು. ಇನ್ನುಳಿದವರನ್ನು ಕೋವಿಡ್ ಕೇರ್ ಕೇಂದ್ರಗಳಲ್ಲಿ ದಾಖಲಿಸುವ ಮೂಲಕ ಔಷಧೋಪಚಾರ ಸೇರಿದಂತೆ ಸೂಕ್ತ ಆರೈಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಆಕ್ಸಿಜನ್ ಹಾಗೂ ರೆಮಿಡಿಸಿವಿರ್ ಕೊರತೆಯನ್ನು ನೀಗಿಸಲು ಸರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಗೆ ಅಗತ್ಯ ಪ್ರಮಾಣದಲ್ಲಿ ಇವುಗಳನ್ನು ಪೂರೈಸಲು ಈಗಾಗಲೇ ಕ್ರಮ ವಹಿಸಿದೆ. ಆಕ್ಸಿಜನ್ ಮತ್ತು ರೆಮಿಡಿಸಿವಿರ್ ಸಮರ್ಪಕ ಬಳಕೆಯ ಮೇಲೆ ಜಿಲ್ಲಾಡಳಿತದಿಂದ ನಿಗಾ ವಹಿಸಲಾಗುತ್ತಿದೆ. ಅಗತ್ಯವಿರುವ ರೆಮಿಡಿಸಿವಿರ್ ನ್ನು ಆಯಾ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಆದಾಗ್ಯೂ ಕೆಲ ತಾಲ್ಲೂಕು ಕೇಂದ್ರಗಳಿಂದಲೂ ಕೊರತೆಯ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಗಮನಹರಿಸಬೇಕು ಎಂದು ತಿಳಿಸಿದರು.
ಗ್ರಾಮ ಮಟ್ಟದಲ್ಲಿ ಕೋವಿಡ್ ಕೇರ್ ಕೇಂದ್ರ ಸ್ಥಾಪನೆಗೆ ನಿರ್ದೇಶನ:
ಗ್ರಾಮ ಮಟ್ಟದಲ್ಲಿ ಕೂಡ ಸೋಂಕಿತರನ್ನು ಸುಲಭವಾಗಿ ಗುರುತಿಸಿ ಪ್ರತ್ಯೇಕವಾಗಿರಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ಅವರು ತಹಶೀಲಾರರಿಗೆ ಸೂಚನೆ ನೀಡಿದರು.
ವಾರ್ ರೂಮ್ ಕಾರ್ಯಚಟುವಟಿಕೆ ಪರಿಶೀಲನೆ:
ಇದೇ ಸಂದರ್ಭದಲ್ಲಿ ರಾಯಬಾಗ ತಾಲ್ಲೂಕಿನಲ್ಲಿ ಇರುವ ಕೋವಿಡ್ ವಾರ್ ರೂಮ್ ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹಾಗೂ ಇತರ ಹಿರಿಯ ಅಧಿಕಾರಿಗಳು ಅಲ್ಲಿನ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿಯನ್ನು ಪಡೆದುಕೊಂಡರು. ಕೋವಿಡ್ ಕೇರ್ ಕೇಂದ್ರಗಳಿಗೆ ಭೇಟಿ ನೀಡಿ ಸೌಲಭ್ಯಗಳನ್ನು ಕೂಡ ಪರಿಶೀಲಿಸಿದರು.
ಚಿಕ್ಕೋಡಿಯಲ್ಲಿ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಯಿತು. ಅದೇ ರೀತಿ ರಾಯಬಾಗದಲ್ಲಿ ರಾಯಬಾಗ, ಅಥಣಿ, ಕಾಗವಾಡ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಲಾಯಿತು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ್, ರಾಯಬಾಗ ತಹಶಿಲ್ದಾರ ಡಾ.ಮೋಹನ್ ಭಸ್ಮೆ, ಅಥಣಿ ತಹಶಿಲ್ದಾರ ದುಂಡಪ್ಪ ಕೋಮಾರ್, ಕಾಗವಾಡ ತಹಶಿಲ್ದಾರ ಶ್ರೀಮತಿ ದೇಶಪಾಂಡೆ, ತಾಲ್ಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.