ಕೂಗು ನಿಮ್ಮದು ಧ್ವನಿ ನಮ್ಮದು

ಕೊರೊನಾಗೆ ಮಹಿಳಾ PSI ಬಲಿ: ಏಳು ತಿಂಗಳ ಗರ್ಭಿಣಿ ಶಾಮಿಲಿ ಸಾವು

ಮಂಗಳೂರು: ಮಹಾಮಾರಿ ಕೊರೊನಾಗೆ ಮಹಿಳಾ ಪಿಎಸ್ಐ ಸಾವಿಗೀಡಾದ ಘಟನೆ ಮಂಗಳೂರಿನಲ್ಲಿ ನಡೆದಿದೆ‌. ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಕಚೇರಿಯಲ್ಲಿ ಪ್ರೊಬೆಷನರಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಾಮಿಲಿ (24) ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಕುರಿತು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು, ತಮ್ಮ ಟ್ವೀಟರ್ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪೊಲೀಸ್ ಕುಟುಂಬದಲ್ಲಿ ಕಿರಿಯ ಸದಸ್ಯರಾಗಿರುವ ಶಾಮಿಲಿ ಕೋವಿಡ್ ಗೆ ಬಲಿಯಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಎಲ್ಲರೂ ಕೋವಿಡ್ ನಿಯಮ ಪಾಲಿಸಿ ಪೊಲೀಸರೊಂದಿಗೆ ಸಹಕರಿಸಿ, ಸುರಕ್ಷಿತವಾಗಿರಿ ಎಂದು ಈ ವೇಳೆ ಮನವಿ ಮಾಡಿದ್ದಾರೆ.

24 ವರ್ಷದ ಪ್ರೊಬೆಷನರಿ ಪಿಎಸ್ಐ ಶಾಮಿಲಿ ಮೂಲತಃ ಕೋಲಾರದವರು. ಜನವರಿ 11 ರಂದು ಮಂಗಳೂರು ಎಸ್ಪಿ ಕಚೇರಿಯಲ್ಲಿ ತಮ್ಮ ಪ್ರೊಬೇಶನರಿ ಸೇವೆ ಆರಂಭಿಸಿದ್ದರು. 7 ತಿಂಗಳ ಗರ್ಭಿಣಿಯಾಗಿದ್ದ ಅವರು ಹೆರಿಗೆ ರಜೆ ತೆಗೆದುಕೊಂಡು ತಮ್ಮ ಊರು ಕೋಲಾರಕ್ಕೆ ಹೋಗಿದ್ದರು. ಬಳಿಕ ಅವರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು ಮೇ 2 ರಂದು ಕೋವಿಡ್ ಚಿಕಿತ್ಸೆಗಾಗಿ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಗರ್ಭಿಣಿಯಾಗಿದ್ದ ಕಾರಣ ಅವರು ಕೋವಿಡ್ ಲಸಿಕೆ ಪಡೆದುಕೊಂಡಿರಲಿಲ್ಲ ಎನ್ನಲಾಗಿದ್ದು, ಮೃತರಾದ ಮಹಿಳಾ ಪೊಲೀಸ್ ಅಧಿಕಾರಿಗೆ ನಾಡಿನ ಮೂಲೆ ಮೂಲೆಗಳಿಂದ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಭಾವಪೂರ್ಣ ನಮನ ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ.

error: Content is protected !!